ಉಡುಪಿ: ನಾಗಮಂಗಲ ತಾಲ್ಲೂಕಿನಲ್ಲಿ ಇಂದು ಓರ್ವ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಆತನ ಟ್ರವಲ್ ಹಿಸ್ಟರಿಯಿಂದ ಉಡುಪಿಯ ಜನತೆಯೂ ಬೆಚ್ಚಿಬೀಳುವಂತಾಗಿದೆ.
ಈತ ಲಾಕ್ ಡೌನ್ ಮಧ್ಯೆಯೇ ಮುಂಬೈನಿಂದ ಮಂಡ್ಯಕ್ಕೆ ಅಕ್ರಮವಾಗಿ ಬಂದಿದ್ದು, ಇದೀಗ ಆತನಲ್ಲಿ ಸೋಂಕು ಕಾಣಿಸಿಕೊಂಡಿದೆ. ಈತನು ಮುಂಬೈಯಲ್ಲಿ ಹೋಟೆಲ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಏಪ್ರಿಲ್ 22ರಂದು ನಾಗಮಂಗಲಕ್ಕೆ ಬಂದಿದ್ದಾನೆ. ಏಪ್ರಿಲ್ 24ರಂದು ಪರೀಕ್ಷೆ ಮಾಡಲಾಗಿದ್ದು, ಇಂದು ಆತನಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ.
ಈ ಸೋಂಕಿತ ಮುಂಬೈಯಿಂದ ಖರ್ಜೂರ ಸಾಗಿಸುವ ಕ್ಯಾಂಟರ್ ನಲ್ಲಿ ಪ್ರಯಾಣ ಮಾಡಿದ್ದು, ಲಾಕ್ ಡೌನ್ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾನೆ. ಹಾಗಾಗಿ ಈತನ ಮೇಲೆ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಉಡುಪಿಯಲ್ಲಿ ಸ್ನಾನ, ಉಪಹಾರ.!
ಏಪ್ರಿಲ್ 20ರಂದು ಮುಂಬೈನಿಂದ ಟ್ರಕ್ ಏರಿದ ಈತ, ಉಡುಪಿಗೆ ಬಂದು ಪೆಟ್ರೋಲ್ ಬಂಕ್ ಬಳಿ ಸ್ನಾನ ಮಾಡಿ ಅಲ್ಲೇ ತಿಂಡಿ ತಿಂದಿದ್ದಾನೆ ಎಂದು ತಿಳಿದುಬಂದಿದೆ. ಅದೇ ವಾಹನದಲ್ಲಿ ಮತ್ತೆ ಪ್ರಯಾಣ ಬೆಳಿಸಿದ ಬಳಿಕ ನಂತರ ಚನ್ನರಾಯಪಟ್ಟಣಕ್ಕೆ ಬಂದು ಇಳಿದು, ಚನ್ನರಾಯಪಟ್ಟಣದಿಂದ ಬಾಮೈದನ ಕಾರಿನಲ್ಲಿ ಮನೆಗೆ ಬಂದಿದ್ದಾನೆ. ಹಾಗಾಗಿ ಈತನ ಜೊತೆ ಆತನ ಹೆಂಡತಿ, ಬಾಮೈದ ಮತ್ತು ಅವರ ಕುಟುಂಬ ಪ್ರೈಮರಿ ಕಾಂಟ್ಯಾಕ್ಟ್ನಲ್ಲಿದ್ದಾರೆ ಎಂದು ಗೊತ್ತಾಗಿದೆ.