ಸಂಸದೆ, ಶಾಸಕರು ನಮ್ಮೂರಿಗೆ ಏನೂ ಮಾಡಿಲ್ಲ, ಇವರ ಓಟಿನ ಭಿಕ್ಷೆಗೆ ನಮ್ಮದು ಬಹಿಷ್ಕಾರದ ಶಿಕ್ಷೆ: ನಾಡ್ಪಾಲು, ಮೇಗದ್ದೆ, ಕೂಡ್ಲು, ಅಜ್ಜೊಳ್ಳಿ ಪ್ರದೇಶದಲ್ಲಿ ಮತದಾನ ಬಹಿಷ್ಕಾರ

ಹೆಬ್ರಿ: ನಮ್ಮೂರಲ್ಲಿ ಅಭಿವೃದ್ದಿಯೇ ಆಗಿಲ್ಲ. ಮೂಲಭೂತ ಸೌಕರ್ಯಗಳೇ ಇಲ್ಲ ಇಲ್ಲಿ , ನಾವ್ಯಾಕ್ರೀ ಓಟ್ ಹಾಕ್ಬೇಕು? ಹೀಗೆಂದು ಜನಪ್ರತಿನಿಧಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು, ನಾಡ್ಪಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗದ್ದೆ, ಕೂಡ್ಲು, ಅಜ್ಜೊಳ್ಳಿ ಪ್ರದೇಶದ ಜನರು.

ಹೌದು, ಈ ಪ್ರದೇಶಗಳಲ್ಲಿ ರಸ್ತೆ, ಬಸ್ಸಿನ ವ್ಯವಸ್ಥೆ, ಶಾಲೆ, ದೂರವಾಣಿ ಸಂಪರ್ಕ, ತುರ್ತು ವೈದ್ಯಕೀಯ ಸೇವೆ ಒಳಗೊಂಡಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಯಿಲ್ಲ. ಹಾಗಾಗಿ ಇಲ್ಲಿನ ಜನರು ಬೇಸತ್ತಿದ್ದಾರೆ. ನಮ್ಮ ಪ್ರದೇಶ ಅಭಿವೃದ್ಧಿಯನ್ನೇ ಕಾಣದ ಮೇಲೆ ಯಾವ ಪುರುಷಾರ್ಥಕ್ಕೆ ನಾವು ಓಟ್ ಹಾಕ್ಬೇಕು ಹೇಳಿ ಎನ್ನುವ ಆಕ್ರೋಶದಿಂದಲೇ  ಏ.೧೮ ರಂದು ನಡೆಯುವ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಮಂಗಳವಾರ ಇಲ್ಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಮಾಧ್ಯಮಗಳ ಮುಂದೆ ಬೇಸರ ತೋಡಿಕೊಂಡರು.

ಯಾಕೆ ಬಹಿಷ್ಕಾರ?

ನಕ್ಸಲ್ ಪೀಡಿತ ಪ್ರದೇಶವಾದ ನಾಡ್ಪಾಲು ಪಂಚಾಯಿತಿಯ ಮೇಗದ್ದೆ, ಕೂಡ್ಲು, ಅಜ್ಜೊಳ್ಳಿ ಪ್ರದೇಶಗಳಲ್ಲಿ ಪ.ಜಾತಿ/ಪ.ಪಂಗಡದ ಹಿಂದುಳಿದ ವರ್ಗಗಳ ಮನೆಗಳು ಸೇರಿದಂತೆ ೧೨೦ ಮನೆಗಳಿದ್ದು, 600ಕ್ಕಿಂತಲೂ ಅಧಿಕ ಮತದಾರರರಿದ್ದಾರೆ. ಆಧರೆ ಇಲ್ಲಿನ ರಸ್ತೆ ಅಭಿವೃದ್ದಿ ವಂಚಿತವಾಶಘಿದೆ. ನೆಲ್ಲಿಕಟ್ಟೆ-ಮೇಗದ್ದೆ-ಕೂಡ್ಲುವರೆಗಿನ ೧೫ ಕಿ.ಮೀ ರಸ್ತೆಯು ೨೦ ವರ್ಷಗಳ ಹಿಂದೆ ಡಾಮರೀಕರಣಗೊಂಡ ಬಳಿಕ  ಅಭಿವೃದ್ತದಿಯೇ ಆಗಿಲ್ಲ.  ರಸ್ತೆ ಹಾಳಾಗಿ   ಬಸ್ಸಿನ ಸಂಪರ್ಕವೂ ಕಡಿತಗೊಂಡು  ಶಾಲಾ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಗ್ರಾಮಸ್ಥರು ೨೦ ಕಿ.ಮೀ. ದೂರದ ಪೇಟೆಗೆ ನಡೆದುಕೊಂಡು ಹೋಗಬೇಕಾದ  ಪರಿಸ್ಥಿತಿ ಇದೆ. ಮಳೆಗಾಲದಲ್ಲಂತೂ ಪರಿಸ್ಥಿತಿ ಚಿಂತಾಜನಕ.

ರಸ್ತೆಯಿಂದ ಬೇಸತ್ತು ಮಕ್ಕಳು ಶಾಲೆಗಳಿಗೆ ಹೋಗುವುದನ್ನೇ ಬಿಟ್ಟು ವಿದ್ಯಾಭ್ಯಾಸವನ್ನೇ ಬಿಟ್ಟಿದ್ದಾರೆ, ಎನ್ನುವುದು ಸ್ಥಳೀಯರಾದ ಗುಳ್ಕಾರು ಭಾಸ್ಕರ ಶೆಟ್ಟಿ, ನಾರಾಯಣ ಭಟ್ ದೇವಸ್ಥಾನಬೆಟ್ಟು, ರಮೇಶ್ ಶೆಟ್ಟಿ, ನವೀನ್ ಶೆಟ್ಟಿ, ಸುಜಾತ ಹೆಗ್ಡೆ ಕೊಲ್ಲಂಗಾರು, ಗುಣವತಿ ಅಜ್ಜೊಳ್ಳಿ, ಸುರೇಶ ವಣಜಾರು ಪ್ರತಿಭಟನೆಯಲ್ಲಿ ತಿಳಿಸಿದ್ದಾರೆ.

ಕೂಡ್ಲು ತೀರ್ಥ ಪ್ರವೇಶ ಶುಲ್ಕ ಹಣ ಎಲ್ಲಿ ಹೋಗ್ತಿದೆ?

ಇಲ್ಲಿರುವ ಪ್ರಸಿದ್ಧ ಕೂಡ್ಲು ತೀರ್ಥ ಪ್ರವಾಸೀ ತಾಣದಲ್ಲಿ ವನ್ಯಜೀವಿ ಇಲಾಖೆಯು ವರ್ಷವೊಂದಕ್ಕೆ ಪ್ರವಾಸಿಗರಿಂದ ಸುಮಾರು  ಹತ್ತು ಲಕ್ಷದಷ್ಟು ಹಣವನ್ನು ಪ್ರವೇಶ ಶುಲ್ಕ ಮತ್ತು ವಾಹನ ನಿಲುಗಡೆ ಶುಲ್ಕ ಸಂಗ್ರಹಿಸುತ್ತಿದೆ. ಈ ಹಿಂದೆ ಇಲಾಖೆಯು ಈ ಭಾಗದ ಗ್ರಾಮೀಣ ಅರಣ್ಯ ಅಭಿವೃದ್ಧಿ ಸಮಿತಿಯೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಸಂಗ್ರಹವಾದ ಶುಲ್ಕದಲ್ಲಿ ಶೇ.೭೫ ಭಾಗವನ್ನು ಇಲ್ಲಿನ ಗ್ರಾಮ ಪ್ರದೇಶದ ಅಭಿವೃದ್ಧಿಗೆ ಮತ್ತು ಶೇ.೨೫ ಅರಣ್ಯ ಇಲಾಖೆಗೆ ಸಂದಾಯ ಮಾಡಬೇಕು ಎನ್ನುವುದು ನಿರ್ಧಾರವಾಗಿದ್ದರೂ,   ಶೇ.೧೦ ಭಾಗವನ್ನು ಮಾತ್ರ ಸ್ಥಳೀಯ ಅಭಿವೃದ್ಧಿಗೆ ನೀಡಲಾಗುತ್ತಿದೆ. ಉಳಿದ ಮೊತ್ತಕ್ಕೆ ಲೆಕ್ಕ ನೀಡಿಲ್ಲ.

ಸಂಸದೆ- ಶಾಸಕರು ನಿದ್ದೆ ಮಾಡ್ತಿದ್ದಾರಾ?

ಇಲ್ಲಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಡಿಸಿಯವರು, ಶಾಸಕರು, ಸಂಸದರು ಭರವಸೆ ನೀಡಿದ್ದರೂ ಈವರೆಗೂ ಇವರ್ಯಾರ ಪತ್ತೆಯೂ ಇಲ್ಲ. ಓಟ್ ಸಮಯಕ್ಕೆ ಬಂದು ಓಟ್ ಭಿಕ್ಷೆ ಬೇಡುತ್ತಾರೆ ಬಿಟ್ಟರೆ ಇವರು ಬೇರೇರೂ ಕೆಲಸ ಮಾಡ್ತಿಲ್ಲ ಎನ್ನುವುದು ಇಲ್ಲಿನ ಜನರ ಆಕ್ರೋಶ

ಈ ಭಾಗದ ರಸ್ತೆಗೆ ೧ ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದ್ದರೂ, ಇದನ್ನು ಬೇರೆಡೆ ಅಭಿವೃದ್ಧಿಗೆ ವರ್ಗಾಯಿಸಿ ಇಲ್ಲಿನ ನಿವಾಸಿಗಳನ್ನು ವಂಚಿಸಲಾಗಿದೆ. ಆದ್ದರಿಂದ್ಲ ಮತದಾನ ಬಹಿಷ್ಕಾರ ಮಾಡಿ, ಜಿಲ್ಲಾಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಹಾಜರಿದ್ದ ಭುಜಂಗ ಶೆಟ್ಟಿ, ವಿಜಯ ಶೆಟ್ಟಿ, ಬಾಬು ಶೆಟ್ಟಿ ಅಜ್ಜೊಳ್ಳಿ, ಶೇಖರ ಶೆಟ್ಟಿ ಮೇಲ್‌ಚಾವಡಿ, ಶ್ರೀನಿವಾಸ್ ಮಾವಿನಹಾಡಿ, ಪ್ರಗತಿಪರ ನಾಗರಿಕ ವೇದಿಕೆ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಹೇಳಿದರು.