ಉಡುಪಿ:ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆದ ಚೆಂಡೆ ವಾದನ ವಿಡಿಯೋ ಈ ಕ್ಷಣದ ವರೆಗೂ ಕರಾವಳಿಗರ ಎದೆಯಲ್ಲಿ ಒಂದೇ ಸಮನೆ ಚೆಂಡೆ ಬಾರಿಸುತ್ತಿದೆ. ಅಂದ ಹಾಗೆ ಈ ಚೆಂಡೆ ವಾದನ ಕಾರ್ಯಕ್ರಮ ನಡೆದದ್ದು ಉಡುಪಿ ಜಿಲ್ಲೆಯ ಪೆರ್ಡೂರಿನ ಸಾಂತ್ಯಾರ್ ನಲ್ಲಿ ಎನ್ನುವುದು ವಿಶೇಷ.ಇಲ್ಲಿನ ಮೂಲ್ಯ ಯಾನೆ ಕುಲಾಲ ಸಂಘ ಬೈರಂಪಳ್ಳಿ ಇದರ ವತಿಯಿಂದ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಹಗ್ಗಜಗ್ಗಾಟ ಪಂದ್ಯಾಕೂಟದ ಸಂದರ್ಭದಲ್ಲಿ ನಡೆದ ಈ ಚೆಂಡೆ ವಾದನ ಅಲ್ಲಿ ನೆರೆದಿದ್ದ ಎಲ್ಲರನ್ನೂ ಥ್ರಿಲ್ಲ್ ಗೊಳಿಸಿದ್ದಲ್ಲದೇ, ಕೆಲವೇ ಸಮಯದಲ್ಲಿ ಚೆಂಡೆವಾದನದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಂದ ಹಾಗೆ ಕರಾವಳಿಗರಲ್ಲಿ ಥ್ರಿಲ್ಲ್ ಮೂಡಿಸಿದ ಈ ಚೆಂಡೆ ಬಳಗ ಯಾವುದು ಗೊತ್ತಾ? ಪೆರ್ಡೂರಿನ ಕಲಾಸಕ್ತ, ಸಂಗೀತದ ಬಗ್ಗೆ ಪ್ರೀತಿಯುಳ್ಳ ಪ್ರವೀಣ್ ನಾಯಕ್ ನೇತೃತ್ವದ ನಾದಂ ಚೆಂಡೆ ಬಳಗವೇ ಎಲ್ಲರನ್ನೂ ಸೆಳೆದದ್ದು.
ಚಿಯರ್ ಬಾಯ್ ಚೇತು ಸಖತ್ ಸಾಂಗ್:
ವಾಷಿಂಗ್ ಪೌಡರ್ ನಿರ್ಮಾ, ರಿಂಗಾ ರಿಂಗಾ ಹಾಡು ಹೇಳಿ ಚೆಂಡೆ ವಾದನಕ್ಕೆ ಸ್ಟೆಪ್ಪ್ ಹಾಕಿದ ಶಂಕರ ಪುರದ ಚಿಯರ್ ಬಾಯ್ ಚೇತು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ಸಲ ಫೇಮಸ್ ಆಗಿಬಿಟ್ಟಿದ್ದಾರೆ. ವಿಭಿನ್ನವಾಗಿ ಮೂಡಿದ ಈ ಚೆಂಡೆ ಬಳಗದ ಈ ಡ್ಯಾನ್ಸ್ ಕಮ್ ಸಾಂಗ್ ವಿಡಿಯೋ ಎಲ್ಲರ ಮೊಬೈಲ್ ಗಳ ಸ್ಟೇಟಸ್ ಗಳಲ್ಲಿ, ಫೇಸ್ಬುಕ್ ಗೋಡೆಗಳಲ್ಲಿಯೂ ಸತತವಾಗಿ ಚೆಂಡೆ ಬಾರಿಸುತ್ತಿದೆ. ನೀವಿನ್ನೂ ಆ ವಿಡಿಯೋ ನೋಡಿಲ್ಲವಾದರೆ ಬೇಗ ನೋಡಿ ಬಿಡಿ. ಫುಲ್ ಖುಷ್ ಆಗ್ತೀರಾ.