‘ ವಿಶ್ವದ ಪ್ರಮುಖ 50 ಸ್ಟ್ರೀಟ್​​ ಫುಡ್‌ಗಳ​ ಪಟ್ಟಿಯಲ್ಲಿ ಮೈಸೂರು ಪಾಕ್​’ಗೆ 14ನೇ ಸ್ಥಾನ

ಮೈಸೂರು: ವಿಶ್ವದ ಪ್ರಮುಖ ಅತ್ಯುತ್ತಮ ಸ್ಟ್ರೀಟ್‌ ಫುಡ್‌ಗಳಲ್ಲಿ ಮೈಸೂರಿನ ಪ್ರಸಿದ್ಧ ಮೈಸೂರು ಪಾಕ್‌ಗೆ 14ನೇ ಸ್ಥಾನ ದೊರೆತಿದೆ. ವಿಶ್ವಮಾನ್ಯತೆ ಪಡೆದ ಹೆಮ್ಮೆಯ ಸಿಹಿತಿಂಡಿಯ ಕುರಿತು ಮೂಲಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಮೈಸೂರು ಮಹಾರಾಜರಿಂದ ನಾಮಕರಣಗೊಂಡ ಸಿಹಿ ತಿಂಡಿಯೇ ಇಂದಿನ ಮೈಸೂರು ಪಾಕ್.
ಮೈಸೂರಿನ ಪ್ರಸಿದ್ಧ ಸಿಹಿತಿಂಡಿ ಮೈಸೂರು ಪಾಕ್‌​ ವಿಶ್ವದ ಪ್ರಮುಖ 50 ಅತ್ಯುತ್ತಮ ಸ್ಟ್ರೀಟ್‌ ಫುಡ್ ಖಾದ್ಯಗಳಲ್ಲಿ 14ನೇ ಸ್ಥಾನ ಪಡೆದಿದೆ. ಇಷ್ಟಕ್ಕೂ ಇದಕ್ಕೆ ಮೈಸೂರು ಪಾಕ್​ ಎಂಬ ಹೆಸರು ಬಂದಿದ್ದು ಹೇಗೆ?. ಮೂಲಸ್ಥರ ಮಾತುಗಳು ಇಲ್ಲಿವೆ.

ಮೈಸೂರಿಗೆ ಆಗಮಿಸುವ ಪ್ರತಿಯೊಬ್ಬ ಪ್ರವಾಸಿಗನೂ ಕೂಡಾ ಮೈಸೂರಿನ ಪಾರಂಪರಿಕ ದೇವರಾಜ ಮಾರುಕಟ್ಟೆಯ ಕಾರ್ನರ್​ನಲ್ಲಿ ಮೂಲ ಮೈಸೂರು ಪಾಕ್ ದೊರೆಯುವ ಗುರು ಸ್ವೀಟ್ಸ್​ನಲ್ಲಿ ಸರತಿ ಸಾಲಿನಲ್ಲಿ ನಿಂತು, ಮೈಸೂರು ಪಾಕ್ ಕೊಂಡುಕೊಳ್ಳದೇ ಇರಲಾರ. ಇಲ್ಲಿ ಈ ದೃಶ್ಯವನ್ನೂ ನೀವು ಇವತ್ತಿಗೂ ಕೂಡ ಕಾಣಬಹುದು. ಇಂತಹ ಮೈಸೂರು ಪಾಕ್‌ಗೆ ಟೇಸ್ಟಿ ಅಟ್ಲಾಸ್​ನ ಸರ್ವೇಯಲ್ಲಿ 4.4 ರೇಟಿಂಗ್ ದೊರೆತಿದೆ.

ಮೈಸೂರ್ ಪಾಕ್ ಉಗಮ: ದೇಶ-ವಿದೇಶಗಳಲ್ಲಿ ಅಪಾರ ಮೆಚ್ಚುಗೆ ಪಡೆದಿರುವ ಮೈಸೂರ್ ಪಾಕ್​ ಸಿಹಿ ಜನ್ಮ ತಾಳಿದ ರೀತಿಯೇ ವಿಶೇಷವಾಗಿದೆ. 1934ರಲ್ಲಿ ಮೈಸೂರಿನ ಒಡೆಯರ್ ಆಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಸ್ಥಾನಕ್ಕೆ ವಿದೇಶಿಗರು ಆಗಮಿಸಿದಾಗ, ಅರಮನೆಯ ಅಡುಗೆ ಭಟ್ಟರಾಗಿದ್ದ ಕಾಕಾಸುರ ಮಾದಪ್ಪನವರಿಗೆ ಸಿಹಿತಿಂಡಿ ಮಾಡಲು ಸೂಚಿಸಿದ್ದರಂತೆ. ಆಗ ಅಡುಗೆ ಭಟ್ಟ ಕಾಕಾಸುರ ಮಾದಪ್ಪ ಬೆಣ್ಣೆ ಕಾಯಿಸಿದ ತುಪ್ಪದಿಂದ ಈ ತಿಂಡಿಯನ್ನು ತಯಾರಿಸಲು ನಿರ್ಧರಿಸುತ್ತಾರೆ. ಶುದ್ಧ ಕಡಲೆ ಹಿಟ್ಟಿಗೆ ಹದವಾಗಿ ಕಾಯಿಸಿದ ತುಪ್ಪ, ಬೆಲ್ಲ, ಅಡುಗೆ ಅರಿಶಿಣ ಹಾಗೂ ಏಲಕ್ಕಿ ಬೆರೆಸಿ ಹದ ಪಾಕದೊಂದಿಗೆ ಸಿಹಿತಿಂಡಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್​ಗೆ ನೀಡಿದರು. ಒಡೆಯರ್ ಈ ತಿಂಡಿಯನ್ನು ತಿಂದು ಸಂತಸಪಟ್ಟು, ಇದಕ್ಕೆ ‘ಮೈಸೂರು ಪಾಕ್’ ಎಂದು ನಾಮಕರಣ ಮಾಡಿದರು ಎನ್ನುವುದು ಇತಿಹಾಸ.

“ಯಾವುದೇ ರಾಜ್ಯ, ವಿದೇಶಕ್ಕೆ ಹೋದರೂ ಮೈಸೂರು ಪಾಕ್ ಎಂದೇ ಕರೆಯುತ್ತಾರೆ. ಮೈಸೂರು ಪಾಕ್​ಗೆ ಈ ಮನ್ನಣೆ ಬಂದಿರುವುದು ಇಡೀ ಕರ್ನಾಟಕ ಮತ್ತು ಮೈಸೂರಿಗೆ ಖುಷಿಯ ವಿಷಯ. ನಮ್ಮ ಮುತ್ತಾತ ಕಾಕಾಸುರಮಾದಪ್ಪ ಅರಮನೆಯಲ್ಲಿ ಬಾಣಸಿಗರಾಗಿದ್ದರು. ಆ ಸಮಯದಲ್ಲಿ ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಒಂದು ಸ್ವೀಟ್ ಮಾಡಲು ಹೇಳುತ್ತಾರೆ. ಆಗ ಮಾಡಿದ ಸ್ವೀಟ್ ಅ​ನ್ನು ರಾಜರು ಸವಿದು ತುಂಬಾ ಖುಷಿ ಪಡುತ್ತಾರೆ. ಮಹಾರಾಜರ ಅಡುಗೆ ಭಟ್ಟರ 5ನೇ ತಲೆಮಾರು: ಇಂದಿಗೂ ಮೈಸೂರಿಗೆ ಬರುವ ಪ್ರವಾಸಿಗರಿಗೆ ಮೈಸೂರು ಪಾಕ್ ಅಂದರೆ ಅಚ್ಚುಮೆಚ್ಚು. ಮೈಸೂರು ಪಾಕ್ ಅ​ನ್ನು ಕಂಡುಹಿಡಿದ ಮಹಾರಾಜರ ಅಡುಗೆ ಭಟ್ಟ ಕಾಕಾಸುರ ಮಾದಪ್ಪನವರ ಐದನೇ ತಲೆಮಾರು, .ಅದಕ್ಕೆ ಏನು ಹೆಸರಿಡಬೇಕೆಂದು ಕೇಳಿದಾಗ, ಮಹಾರಾಜರು ಮೈಸೂರು ಒಂದು ಸ್ಥಳ, ಜೊತೆಗೆ ಪಾಕ ಅನ್ನೋದು ಸಕ್ಕರೆ ರಸ. ಹಾಗಾಗಿ ಇದಕ್ಕೆ ಮೈಸೂರು ಪಾಕ್ ಸೂಕ್ತ ಎಂದಿದ್ದರು. ಹೀಗೆ ಈ ಹೆಸರು ಬಂತು. ಮೈಸೂರು ಪಾಕ್​ಗೆ ಜಾಗತಿ ಸ್ಟ್ರೀಟ್‌ ಫುಡ್‌ ಪಟ್ಟಿಯಲ್ಲಿ 14ನೇ ಸ್ಥಾನ ಬಂದಿರುವುದಕ್ಕೆ ಕೃತಜ್ಞತೆ ತಿಳಿಸುತ್ತೇನೆ” ಎಂದು ಕಾಕಾಸುರ ಮಾದಪ್ಪನವರ ವಂಶಸ್ಥರಾದ ಶಿವಾನಂದ ಈಟಿವಿ ಭಾರತ್‌ಗೆ ತಿಳಿಸಿದರು.ಈಗಲೂ ದೇವರಾಜ ಮಾರುಕಟ್ಟೆಯಲ್ಲಿ ಗುರು ಸ್ವೀಟ್ ಅಂಗಡಿ ನಡೆಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಮೈಸೂರು ಪಾಕ್ ಮನ್ನಣೆ ಪಡೆದಿರುವ ಬಗ್ಗೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ