ಚಾಮರಾಜನಗರ ಕೋವಿಡ್ ಸೋಕಿತರ ಸಾವು ಪ್ರಕರಣ: ಮೈಸೂರು, ಚಾಮರಾಜನಗರ ಡಿಸಿ ಕಚೇರಿ, ಆಸ್ಪತ್ರೆಯ ದಾಖಲೆಗಳನ್ನು ಸೀಜ್ ಮಾಡುವಂತೆ ಹೈಕೋರ್ಟ್ ಆದೇಶ

ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಕೋವಿಡ್ ಸೋಂಕಿತರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಸ್ಪತ್ರೆಯ, ಚಾಮರಾಜನಗರ ‌ಜಿಲ್ಲಾಧಿಕಾರಿ, ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿನ ಎಲ್ಲಾ ದಾಖಲೆಗಳನ್ನು ತಕ್ಷಣ ಸೀಜ್ ಮಾಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಈ ಬಗ್ಗೆ ಆದೇಶ ನೀಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಸೀಜ್ ಮಾಡಿದ‌ ದಾಖಲೆಗಳನ್ನು ಸರ್ಕಾರ ನೇಮಿಸಿದ ತನಿಖಾಧಿಕಾರಿ ಪರಿಶೀಲಿಸಬಹುದು ಎಂದು ಹೇಳಿದ್ದಾರೆ.

ಆಕ್ಸಿಜನ್ ಕೊರತೆಯಿಂದ 24 ಕೋವಿಡ್ ಸೋಂಕಿತರು ಸಾವಿಗೀಡಾದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಸರ್ಕಾರ ಸಿದ್ಧವಿದೆ. ನಿವೃತ್ತ ನ್ಯಾಯಮೂರ್ತಿಯೊಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಅವರು ಹೈಕೋರ್ಟ್‌ಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಾಂಗ ತನಿಖೆ ಕುರಿತು ನಿಲುವು ತಿಳಿಸಲಷ್ಟೇ ನಾವು ಹೇಳಿದ್ದೆವು. ನಿವೃತ್ತ ನ್ಯಾಯ ಮೂರ್ತಿಗಳನ್ನು ಸರ್ಕಾರ ನೇಮಕ ಮಾಡುವುದಲ್ಲ. ಆ ನಿರ್ಧಾರವನ್ನು ಹೈಕೋರ್ಟ್‌ಗೆ ಬಿಡಿ ಎಂದರು.