ಅಂದು ನನ್ನ ಕನಸಿನ ದಿನಗಳಲ್ಲಿ ಮುಳುಗಿ ಹೋದ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ. ಎಲ್ಲಾ ಹುಡುಗಿಯರ ಹಾಗೆಯೇ ನನ್ನ ಮನಸ್ಸಿನಲ್ಲಿಯು ಒಂದು ಆಸೆ ಮೊಳಕೆಯೊಡೆದಿತ್ತು. ನನ್ನ ಜೀವನದಲ್ಲಿ ಬರುವಂತಹ ಸಂಗಾತಿ, ನನ್ನ ಇಷ್ಟಪಡುವ ಜೀವ ಹೇಗಿರಬೇಕೆಂದು ಊಹಿಸಿಕೊಳ್ಳುವ, ಕನಸ್ಸುಗಳನ್ನು ಕಟ್ಟಿಕೊಳ್ಳುವ ಆ ವಯಸ್ಸು. ಹಾಗೆಯೇ ನಾನೂ ಸಹ ಒಂದು ಸುಂದರ ಕನಸನ್ನು ಕಟ್ಟಿದ್ದೆ. ಆ ದಿನಗಳಲ್ಲಿ ಎಷ್ಟು ಯೋಚಿಸಿದರು ಸಾಕಾಗುತ್ತಿರಲಿಲ್ಲ, ದಿನದ ಎಲ್ಲಾ ಕ್ಷಣಗಳನ್ನು ಯೋಚಿಸುವುದಕ್ಕೆ ಮೀಸಲಿಡುತ್ತಿದ್ದೆ. ನನಗೆ ತಿಳಿಯದೆ ನನ್ನಲ್ಲಿ ಬದಲಾವಣೆಯಾಗುತ್ತಿತ್ತು. ಶಾಲೆಗೆ ಹೋದರೂ, ಸ್ನೇಹಿತರ ಜೊತೆ ಬೆರೆತರೂ, ನನ್ನ ಮನಸ್ಸು ಮಾತ್ರ ಅಲ್ಲಿರದೇ, ನನ್ನ ಲೋಕದಲ್ಲಿಯೇ ಮುಳುಗಿ ಹೋಗುತ್ತಿದ್ದೆ. ಕೆಲವೊಮ್ಮೆ ಯೋಚನೆಯಲ್ಲಿ ಮುಳುಗಿದ ನನಗೆ ನನ್ನ ಮನೆಯ ದಾರಿಯೂ ದೂರವೆನಿಸುತ್ತಿತ್ತು.
ಅಂದು ಕಂಡ ಆ ಕನಸು ನನಸಾಗುವುದಕ್ಕೆ ಬಹಳ ಸಮಯ ತೆಗೆದುಕೊಂಡಿತು. ನನ್ನ ಇಷ್ಟಪಡುವ ಹೃದಯವನ್ನು ಕಾಣುವುದಕ್ಕೆ ಎಲ್ಲಿಲ್ಲದ ಹಂಬಲ, ಆದರೆ ಕಾಲವು ನನ್ನನ್ನು ತುಂಬಾ ಕಾಡಿಸಿತು. ನಂತರ ನನ್ನ ಕಾಯುವಿಕೆಗೆ ಆದಷ್ಟು ಬೇಗನೆ ವಿದಾಯ ಹೇಳುವ ಸಮಯ ಬಂದೇ ಬಿಟ್ಟಿತು. ಅಂತೂ ನನ್ನ ಯೋಚನೆಗೆ ಕೊನೆ ಸಿಕ್ಕಿತು. ಆ ದಿನಗಳು ನನಗೆ ಎಲ್ಲಿಲ್ಲದ ತಳಮಳ, ಮನಸ್ಸಿನಲ್ಲಿ ಏನೋ ಉಲ್ಲಾಸ. ಆ ದಿನವು ನನ್ನ ಪಾಲಿಗೆ ಎಂದೂ ಮರೆಯಲಾಗದ ದಿನವಾಗಿತ್ತು. ಹಾಗೆಯೇ ತುಂಬಾ ಸಂತೋಷವೂ ಸಹ ಅಡಗಿತ್ತು. ಏಕೆಂದರೆ ನಾ ಕಂಡ ಕನಸಿನ ಹೃದಯಕ್ಕಿಂತ ಅದರ ಹತ್ತು ಪಟ್ಟು ಹೆಚ್ಚು ಪ್ರೀತಿ ಕೊಡುವ ಹೃದಯ ನನ್ನದಾಯಿತು.
ಆದರೆ ಆ ಹೃದಯ ನನ್ನ ಸ್ವಂತವಾಗಲು ತುಂಬಾ ದಿನಗಳೇ ಬೇಕಾಯಿತು. ಆ ಹೃದಯಕ್ಕೂ ನಾನು ಇಷ್ಟವಾಗಬೇಕಿತ್ತು. ಆದ್ದರಿಂದ ನನ್ನ ಪ್ರೀತಿಯನ್ನು ನನ್ನ ಹೃದಯದಲ್ಲೇ ಬಚ್ಚಿಟ್ಟೆ. ಕೊನೆಗೆ ನಾ ಇಷ್ಟಪಟ್ಟ ಹೃದಯವೇ ನನ್ನನ್ನು ಪ್ರೀತಿಸಲು ಆರಂಭಿಸಿತು. ನನ್ನ ಬಳಿ ಆ ಪ್ರೀತಿಯನ್ನು ವ್ಯಕ್ತಪಡಿಸಿತು. ಆದರೆ ಆ ಪ್ರೀತಿಯನ್ನು ಒಪ್ಪಿಕೊಳ್ಳುವ ಮನಸ್ಸಿದ್ದರೂ ಬೇಡವೆನಿಸಿತು. ಏಕೆಂದರೆ ಆ ಪ್ರೀತಿಯನ್ನು ಪಡೆಯುವ ಯೋಗ್ಯತೆ ನನ್ನಲ್ಲಿ ಇಲ್ಲವೆನಿಸಿತು. ನನ್ನದು ಸ್ವಾರ್ಥದ ಪ್ರೀತಿಯಾಗಬಾರದೆಂದು ಆ ಹೃದಯವನ್ನು ಕಾಯಿಸಿದೆ ಆದರೆ ದಿನ ಕಳೆದಂತೆ ನನ್ನ ಪ್ರೀತಿಯನ್ನು ಮುಚ್ಚಿಡಲು ಆಗಲಿಲ್ಲ. ಆ ಹೃದಯಕ್ಕೆ ಕೊನೆಗೂ ನನ್ನ ಒಪ್ಪಿಗೆಯನ್ನು ತಿಳಿಸಿಯೇ ಬಿಟ್ಟೆ. ಆ ದಿನ ಯಾವತ್ತೂ ನೆನಪಿನಲ್ಲಿರುವಂತಹದ್ದು. ಬರುಬರುತ್ತಾ ಒಂದು ಹೃದಯ ಇನ್ನೊಂದು ಹೃದಯವನ್ನು ಬಿಡದೇ ಇರುವಷ್ಟು ಇಷ್ಟಪಟ್ಟಾಗಿದೆ. ಇನ್ನೂ ಆ ಹೃದಯವೇ ಸ್ವಂತವಾಯಿತು. ಬಿಡಲಾರದಂತಹಾ ಗಟ್ಟಿ ಬಂಧವಾಯಿತು.