ಉಡುಪಿ: ಖ್ಯಾತ ಸಂಗೀತ ವಿದುಷಿ ವಸಂತಿ ರಾಮಭಟ್ (82) ಅವರು ಭಾನುವಾರ ನಿಧನರಾದರು.
ವಸಂತಿ ಎಂ.ಜಿ.ಎಂ.ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ರಾಮ ಭಟ್ ಅವರ ಧರ್ಮಪತ್ನಿ. ರಾಗಧನ ಸಂಸ್ಥೆಯ ಸಕ್ರಿಯ ಕಾರ್ಯಕಾರಿ ಸಮಿತಿ ಸದಸ್ಯೆ. ಹಲವಾರು ಸಂಗೀತಗಾರರಿಗೆ ಸಾಥ್ ನೀಡಿದ ಉಡುಪಿಯ ಹೆಮ್ಮೆಯ ಕಲಾವಿದೆ. ನೂರಾರು ಶಿಷ್ಯರಿಗೆ ವಯಲಿನ್ ತರಬೇತಿ ನೀಡಿರುತ್ತಾರೆ. ಮಗ ಡಾ.ಸತೀಶ್, ನೇತ್ರ ತಜ್ಞ, ಮಗಳು ವಿನಯ ಕಂಪ್ಯೂಟರ್ ಇಂಜಿನಿಯರ್. ಪುತ್ರ ದೇವೇಶ್ ಭಟ್ ಮೃದಂಗ ವಿದ್ವಾನ್.
ತಾಯಿಯ ತಂದೆ ಪಿಡ್ಲು ಕೃಷ್ಣರಾಯರು, ಉಡುಪಿ ಲಕ್ಷ್ಮೀ ಬಾಯಿ ಇವರ ಸಂಗೀತ ಗುರುಗಳು, ಗುರುಗಳ ಹೆಸರಲ್ಲಿ ನಿರಂತರ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದರು. ಉತ್ತಮ ಟೆನಿಸ್ ಚಾಂಪಿಯನ್ ಆಗಿದ್ದವರು. ಪ್ರಪಂಚಂ ಸೀತಾರಾಂ, ಆರ್.ಕೆ.ಪದ್ಮನಾಭ, ಲುಡ್ವಿಗ್ ಪೆಶ್ಚ್, ಕದ್ರಿ ಗೋಪಾಲನಾಥ್ ಸೇರಿದಂತೆ ಬಾಲಪಾಠದಲ್ಲಿರುವ ಮಕ್ಕಳಿಗೂ ವಯೊಲಿನ್ ಸಾಥ್ ನೀಡುತ್ತಿದ್ದರು.
ಅಂಬಲಪಾಡಿ ಸಮೀಪದ ಕಿದಿಯೂರುನಲ್ಲಿ ನೆಲೆಸಿದ್ದರು. ಸಂಗೀತಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದ ಹಿರಿಯ ಕಲಾವಿದೆ ಆಬಾಲವೃದ್ಧರಾದಿಯಾಗಿ ಅಸಂಖ್ಯ ಸಂಗೀತ ಕಲಾವಿದರಿಗೆ ವಯಲಿನ್ ಸಹವಾದನವಿತ್ತು ಅನೇಕರಿಗೆ ವಯಲಿನ್ ವಿದ್ಯೆ ಧಾರೆಯೆರೆದು ಉಡುಪಿ ಸೇರಿದಂತೆ ಕರಾವಳಿ ನೆಲದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಂವರ್ಧನೆಗೆ ಮಹತ್ವದ ಕೊಡುಗೆ ಸಲ್ಲಿಸಿದ್ದಾರೆ.