ಮುರುಘಾ ಶ್ರೀ ಬಿಡುಗಡೆ: ಇಂದು ಚಿತ್ರದುರ್ಗ ಜೈಲಿನಿಂದ ಬಿಡುಗಡೆ

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶರಣರು ಇಂದು ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.ಮುರುಘಾ ಶ್ರೀ ವಿರುದ್ಧದ ಎರಡು ಪೋಕ್ಸೋ ಪ್ರಕರಣಗಳ ಪೈಕಿ ಒಂದರಲ್ಲಿ ಈಗಾಗಲೇ ಜಾಮೀನು ದೊರೆತಿದೆ.

ಚಿತ್ರದುರ್ಗ ಜೈಲಿನಿಂದ ಶ್ರೀಗಳು ನಿನ್ನೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಚಿತ್ರದುರ್ಗದ ಕೋರ್ಟ್​ಗೆ ಹಾಜರಾಗಿದ್ದರು. ಬುಧವಾರ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯ ಹೈಕೋರ್ಟ್​ ವಿಧಿಸಿದ್ದ ಷರತ್ತುಗಳನ್ನು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನಂತರ ಜಿಲ್ಲಾ ಕಾರಾಗೃಹದ ಅಧಿಕಾರಿಗಳಿಗೆ ಶ್ರೀಗಳನ್ನು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿತ್ತು. ಆದರೆ ಆದೇಶದ ಪ್ರತಿ ತಡವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿದ ಕಾರಣ ಬುಧವಾರ ಶ್ರೀಗಳನ್ನು ಬಿಡುಗಡೆ ಮಾಡಿರಲಿಲ್ಲ. ಹಾಗಾಗಿ ಇಂದು ಶ್ರೀಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಶ್ರೀಗಳಿಗೆ ನ್ಯಾಯಾಂಗ ಬಂಧನದಿಂದ ಬಿಡುಗಡೆಯಾಗಿದ್ದರೂ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ಚಿತ್ರದುರ್ಗದಲ್ಲಿ ಇರುವಂತಿಲ್ಲ ಎಂಬ ಷರತ್ತು ಇರುವುದರಿಂದ ಶ್ರೀಗಳು ತಕ್ಷಣ ಅಲ್ಲಿಂದ ಬೇರೊಂದು ಕಡೆ ಹೋಗಬೇಕಾಗಿದೆ.ನವೆಂಬರ್ 8ರಂದು ಒಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜಾಮೀನು ನೀಡಿದ್ದರೂ, ಇನ್ನೊಂದು ಪ್ರಕರಣದ ವಿಚಾರಣೆ ಬಾಕಿ ಉಳಿದಿದ್ದ ಕಾರಣ ಮುರುಘಾ ಶರಣರ ಬಿಡುಗಡೆಯಾಗಿರಲಿಲ್ಲ. ಇದೀಗ ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯ ಶ್ರೀಗಳನ್ನು ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದು, ಇಂದು ಜೈಲಿನಿಂದ ಹೊರಬಂದಿದ್ದಾರೆ.ಶ್ರೀಗಳ ವಿರುದ್ಧ ಎರಡು ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷದ ಡಿಸೆಂಬರ್​ನಿಂದ ಶ್ರೀಗಳು ಚಿತ್ರದುರ್ಗಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.

ಪ್ರಕರಣದ ಹಿನ್ನೆಲೆ: ಮಠದ ಅಧೀನದಲ್ಲಿದ್ದ ವಸತಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ಇಬ್ಬರು ಬಾಲಕಿಯರು ಮೈಸೂರಿನ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ಸೇರಿ ಐವರ ವಿರುದ್ಧ 2022ರ ಆಗಸ್ಟ್ 26ರಂದು ದೂರು ದಾಖಲಿಸಿದ್ದರು. ಆನಂತರ ಅದನ್ನು ವ್ಯಾಪ್ತಿ ಹೊಂದಿರುವ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು. ಶರಣರನ್ನು 2022ರ ಸೆಪ್ಟೆಂಬರ್ 1ರಂದು ಬಂಧಿಸಲಾಗಿತ್ತು.

ಈ ನಡುವೆ ಶ್ರೀಗಳ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ ಸೆಕ್ಷನ್‌ಗಳಾದ 17, 5(L), 6, ಐಪಿಸಿ ಸೆಕ್ಷನ್‌ಗಳಾದ 376(2)(ಎನ್), 376(ಡಿಎ), 376(3), 201, 202, 506 ಜೊತೆಗೆ 34, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ ಸೆಕ್ಷನ್ 3(ಎಫ್) ಮತ್ತು 7 ಹಾಗೂ ಬಾಲ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಆರೈಕೆ) ಸೆಕ್ಷನ್ 75ರ ಅಡಿ ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ಇದರಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ಪೋಕ್ಸೋ ಕಾಯಿದೆ 17,5(1),6, ಐಪಿಸಿ ಸೆಕ್ಷನ್‌ಗಳಾದ 376(2)(ಎನ್), 376(ಡಿಎ), 376(3), 201, 202, 506 ಜೊತೆಗೆ 34, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಸೆಕ್ಷನ್‌ಗಳಾದ 3(1)(ಡಬ್ಲ್ಯು)(i)(ii), 3(20(v)(va), ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ ಸೆಕ್ಷನ್ 3(ಎಫ್) ಮತ್ತು 7 ಹಾಗೂ ಬಾಲ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಆರೈಕೆ) ಸೆಕ್ಷನ್ 75ರ ಅಡಿ ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿಯೂ ಜಾಮೀನು ಮಂಜೂರಾಗಿದೆ.
ಇತ್ತೀಚೆಗೆ ಹೈಕೋರ್ಟ್​ನಿಂದ ಜಾಮೀನು: ಮಠದಲ್ಲಿ ನೆಲೆಸಿದ್ದ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ರಾಜೇಂದ್ರ ಮಠದ ಡಾ. ಶಿವಮೂರ್ತಿ ಶರಣರಿಗೆ ಹೈಕೋರ್ಟ್ ಒಂದು ಪ್ರಕರಣದಲ್ಲಿ ಇತ್ತೀಚೆಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ, ಮತ್ತೊಂದು ಪ್ರಕರಣದಿಂದ ಜಾಮೀನು ಲಭ್ಯವಾಗವೇಕಾಗಿದ್ದ ಪರಿಣಾಮ ಜೈಲಿನಿಂದ ಬಿಡುಗಡೆ ಆಗುವುದಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ಮತ್ತೊಂದು ಪ್ರಕರಣದಲ್ಲೂ ಜಾಮೀನು ಲಭ್ಯವಾಗಿದ್ದು, ಬಿಡುಗಡೆಗೊಂಡಿದ್ದಾರೆ.