ಬಾರ್ ಮಾಲೀಕ ಮನೀಶ್ ಶೆಟ್ಟಿ ಕೊಲೆ: ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆಗೆ ಪ್ರತೀಕಾರ

ಬೆಂಗಳೂರು: ಗುರುವಾರ ರಾತ್ರಿ ನಡೆದ ಬೆಂಗಳೂರಿನ ಬ್ರಿಗೇಡ್ ರಸ್ತೆ ಸಮೀಪದ ಡ್ಯೂಯೆಟ್ ಬಾರ್‌ ಮಾಲೀಕ ಮನೀಶ್ ಶೆಟ್ಟಿ ಕೊಲೆ ಪ್ರಕರಣ ಇದೀಗ ಭೂಗತ ಜಗತ್ತಿನೊಂದಿಗೆ ನಂಟು ಬೆಸೆದುಕೊಳ್ಳುತ್ತಿದೆ.

ಇತ್ತೀಚೆಗೆ ಹಿರಿಯಡಕದಲ್ಲಿ ನಡೆದ ರೌಡಿಶೀಟರ್ ಕಿಶನ್ ಹೆಗ್ಡೆ ಕೊಲೆಗೆ ಸಂಬಂಧಿಸಿದಂತೆ ಮನೀಶ್ ಶೆಟ್ಟಿ ಹಣಕಾಸಿನ ಸಹಕಾರ ನೀಡಿದ್ದನು. ಕಿಶನ್ ಹೆಗ್ಡೆಯನ್ನು ಕೊಲೆ ಮಾಡಲು ಮನೋಜ್ ಕೋಡಿಕೆರೆ ಸಹಚರರಿಗೆ ಫೈನಾನ್ಸ್ ಮಾಡಿದ್ದನು. ಕಿಶನ್ ಹೆಗ್ಡೆ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಆಪ್ತನಾಗಿದ್ದ. ಹೀಗಾಗಿ ವಿಕ್ಕಿ ಶೆಟ್ಟಿಯ ಗ್ಯಾಂಗ್​ನಿಂದ ಮನೀಶ್ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ, ಕಿಶನ್ ಹೆಗ್ಡೆ ಅಣ್ಣ ಬಳ್ಳಾರಿ ಜೈಲಿನಲ್ಲಿ ಇದ್ದಾನೆ. ಅವನ ಅಣತಿಯಂತೆ ಮತ್ತು ವಿಕ್ಕಿ ಶೆಟ್ಟಿ ಅಣತಿಯಂತೆ‌ ಮನೀಶ್ ಶೆಟ್ಟಿಯನ್ನು ಕೊಲೆಮಾಡಲಾಗಿದೆ ಅನ್ನೋ ಮಾತು ಕೇಳಿಬಂದಿದೆ.

ಬನ್ನಂಜೆ ರಾಜ ಆಪ್ತ:

ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಕೊಲೆಯಾದ ಬಾರ್ ಮಾಲೀಕ ಮನೀಶ್ ಶೆಟ್ಟಿ, ಈ ಹಿಂದೆ ಭೂಗತ ಪಾತಕಿಗಳಾದ ಬನ್ನಂಜೆ ರಾಜ ಹಾಗೂ ರವಿ ಪೂಜಾರಿಯ ಪಾಳಾಯದಲ್ಲಿ ಗುರುತಿಸಿಕೊಂಡಿದ್ದನು. ಬನ್ನಂಜೆ ರಾಜನ ಆಪ್ತನಾಗಿದ್ದು, ಕೊಲೆ, ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದನು.

ಮನೀಶ್ 2007ರಲ್ಲಿ ಬೆಂಗಳೂರಿನ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚೆಮ್ಮನೂರು ಜುವೆಲರ್ಸ್ ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ತನ್ನ ಏಂಟು ಜನ ಸಹಚರರಿಂದ ದರೋಡೆ ಮಾಡಿಸಿದ್ದನು. ಈತನ ವಿರುದ್ದ ಬೆಂಗಳೂರು, ಮಂಗಳೂರು, ಕಾಸರಗೋಡು, ಮುಂಬೈಗಳಲ್ಲಿ ಕೊಲೆ, ಹಲ್ಲೆ, ಬೆದರಿಕೆ ಪ್ರಕರಣಗಳಿವೆ. ಕಾಸರಗೋಡಿನ ಗುತ್ತಿಗೆದಾರನೊಬ್ಬನ ಕೊಲೆ ಪ್ರಕರಣದ ಆರೋಪಿ ಕೂಡ ಆಗಿದ್ದಾನೆ. ಈ ಪ್ರಕರಣದಲ್ಲಿ ಜೈಲು ವಾಸವನ್ನು ಅನುಭವಿಸಿದ್ದನು. ಬಳಿಕ ಬೆಂಗಳೂರಿಗೆ ಬಂದು ಬಾರ್ ತೆರೆದಿದ್ದನು. ಕರಾವಳಿ ಮೂಲದ ಪಾತಕಿಗಳೊಂದಿಗೆ ಸೇರಿಕೊಂಡು ಭೂಗತ ಚಟುವಟಿಕೆಗಳನ್ನು ಮುಂದುವರಿಸಿದ್ದನು ಎಂದು ಹೇಳಲಾಗುತ್ತಿದೆ.

ಹತ್ಯೆಗೆ ಹೊಂಚು ಹಾಕಿ ಕುಳಿತಿದ್ದ ಹಂತಕರು:
ಮನೀಶ್ ಹತ್ಯೆಗೆ ದುಷ್ಕರ್ಮಿಗಳು ಪೂರ್ವ ತಯಾರಿ ನಡೆಸಿಕೊಂಡು ಬಂದಿದ್ದರು. ನಿನ್ನೆ ರಾತ್ರಿ ಏಳು ಗಂಟೆಯಿಂದ ಬಾರ್ ಮುಂಭಾಗ ಮನೀಶ್ ಗಾಗಿ ಹೊಂಚು ಹಾಕಿ ಕುಳಿತಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮನೀಶ್ ಬಾರ್ ಗೆ ಬಂದೊಡನೆ ಬೈಕ್ ನಲ್ಲಿ ಬಂದಿದ್ದ ಮೂವರು ಹಂತಕರು, ಗನ್ ನಿಂದ ಎದೆ ಶೂಟ್ ಮಾಡಿದ್ದಾರೆ. ಬಳಿಕ ನೆಲಕ್ಕುರುಳಿದ ಮನೀಶ್ ದೇಹಕ್ಕೆ ಮಚ್ಚಿನಿಂದ ಕೊಚ್ಚಿದ್ದಾರೆ. ಮನೀಶ್ ಪ್ರಾಣ ಬಿಟ್ಟಿದ್ದಾನೆ ಎಂದು ಖಚಿತಪಡಿಸಿಕೊಂಡ ಬಳಿಕ ಹಂತಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿದುಬಂದಿದೆ.

ಹಂತಕರ ಪತ್ತೆ 9 ವಿಶೇಷ ತಂಡ ರಚನೆ:
ಮನೀಶ್ ಶೆಟ್ಟಿ ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರು 9 ವಿಶೇಷ ತಂಡಗಳ ರಚನೆ ಮಾಡಿದ್ದಾರೆ. ಈಗಾಗಲೇ ಹಂತಕರು ಹತ್ಯೆ ಮಾಡಿ ಬಿಟ್ಟು ಹೋಗಿರುವ ಗನ್, ಬೈಕ್ ಗಳು ಘಟನಾಸ್ಥಳದ ಸ್ವಲ್ಪ ದೂರದಲ್ಲಿ ಸಿಕ್ಕಿದೆ. ತನಿಖೆಯನ್ನು ಚುರುಕು ಗೊಳಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.