ಆಗ್ರಾ: ದಂತ ವೈದ್ಯೆಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಇಲ್ಲಿನ ಡಾ. ನಿಶಾ ಸಿಂಘಾಲ್ ಕೊಲೆಯಾದ ದುರ್ದೈವಿ. ಸೆಟ್ ಟಾಪ್ ಬಾಕ್ಸ್ ರೀಚಾರ್ಜ್ ಮಾಡುವ ನೆಪದಲ್ಲಿ ಬಂದ ಹಂತಕನೊಬ್ಬ ಈಕೆಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ನಿಶಾ ಅವರಿಗೆ 8 ಮತ್ತು 4 ವರ್ಷದ ಇಬ್ಬರು ಮಕ್ಕಳಿದ್ದು, ಇಬ್ಬರು ಪಕ್ಕದ ಕೋಣೆಯಲ್ಲಿ ಮಲಗಿದ್ದರು. ಈ ವೇಳೆಯೇ ವೈದ್ಯೆಯ ಹತ್ಯೆಯಾಗಿದೆ ಎಂದು ತಿಳಿದುಬಂದಿದೆ.
ಹಂತಕ ಹರಿತವಾದ ಚಾಕುವಿನಿಂದ ನಿಶಾ ಅವರ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಮಕ್ಕಳ ಮೇಲೂ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಶಾ ಅವರ ಪತಿ ಕೂಡ ಸರ್ಜನ್ ಆಗಿದ್ದು, ಕೊಲೆ ನಡೆದ ಸಂದರ್ಭದಲ್ಲಿ ಅವರು ಡ್ಯೂಟಿಯಲ್ಲಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಇಂದು ಬೆಳಗ್ಗೆ ಬಂಧಿಸಿದ್ದಾರೆ.