ಮುಂಬಯಿ “ಬೊಂಬಾಯಿಡ್ ತುಳುನಾಡ್”ವಿಶ್ವ ಮಟ್ಟದ ತುಳುಸಮ್ಮೇಳನದ ಅಧ್ಯಕ್ಷರಾಗಿ ಡಾ।ಸುನೀತಾ ಎಂ. ಶೆಟ್ಟಿ ಆಯ್ಕೆ

ಮುಂಬಯಿ: ಕಲಾಜಗತ್ತು ಮುಂಬಯಿ ಆಶ್ರಯದಲ್ಲಿ ನವೆಂಬರ್ 8-10ರ ವರೆಗೆ ಮಹಾರಾಷ್ಟ್ರ ಮತ್ತು ಗುಜರಾತ್ ತುಳುವರ ಕೂಡುವಿಕೆಯೊಂದಿಗೆ ಮುಂಬೈನಲ್ಲಿ ನಡೆಯಲಿರುವ “ಬೊಂಬಾಯಿಡ್ ತುಳುನಾಡ್ “ವಿಶ್ವಮಟ್ಟದ ತುಳುಸಮ್ಮೇಳನದ ಅಧ್ಯಕ್ಷರಾಗಿ ಮುಂಬಯಿಯ ಹಿರಿಯ ಸಾಹಿತಿ ಡಾ ।ಸುನೀತಾ ಎಂ. ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ಮುಂಬಯಿಯ ಕಾಂದಿವಿಲಿ ಪಶ್ಚಿಮದ ಪೊಯ್ಸರ್ ಜಿಮ್ಖಾನ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ತುಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ, ತುಳು ನಾಟಕ, ಜಾನಪದ ನೃತ್ಯಗಳು, ತುಳುನಾಡಿನ ಪ್ರಾಚೀನ ವಸ್ತುಗಳ ಪ್ರದರ್ಶನ, ಕೊರಗರ ಡೋಲು, ತುಳುನಾಡ ಪ್ರಾಚೀನ ಕ್ರೀಡೆಗಳ ಪರಿಚಯ, ಮುಂಬಯಿಯಲ್ಲಿರುವ ತುಳುನಾಡ ಸಾಧಕರ ಸಮ್ಮಾನ, ಪ್ರಶಸ್ತಿ ಪ್ರದಾನ, ತುಳುನಾಡ ಆಹಾರ ಖಾದ್ಯಗಳ ಪ್ರದರ್ಶನ, ಮಕ್ಕಳಿಗೆ ಕಾರ್ಯಾಗಾರಗಳು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ಕಲಾಜಗತ್ತು ಮುಂಬಯಿ ಇದರ ಅಧ್ಯಕ್ಷ ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.