ಮಲ್ಪೆ: ಅಸಾಯಕ ಸ್ಥಿತಿಯಲ್ಲಿದ್ದ ಬಾಲಕನ ರಕ್ಷಣೆ, ಪೋಷಕರಿಗೆ ಹಸ್ತಾಂತರ

ಮಲ್ಪೆ: ಕೊಡವೂರು ಸಮೀಪದ ಜುಮಾದಿನಗರ ಬಸ್ ಸ್ಟಾಂಡ್ ನಲ್ಲಿ ಮನೆ ಬಿಟ್ಟು ಬಂದು ಅಸಾಯಕನಾಗಿ ಕುಳಿತಿದ್ದ ಸುಮಾರು 9 ವರ್ಷದ ಬಾಲಕನನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣೆ ಮಾಡಿ ಪೋಷಕರಿಗೆ ಹಸ್ತಾಂತರ ಮಾಡಿದೆ.

ಬಸ್ ನಿಲ್ದಾಣದಲ್ಲಿ ತುಂಬಾ ಹೊತ್ತಿನಿಂದ ಕುಳಿತಿದ್ದನ್ನು ಬಾಲಕನನ್ನು ಗಮನಿಸಿದ ಮೆಸ್ಕಾಂ ಸಿಬ್ಬಂದಿ ರವಿ ಕೊಡವೂರು ಮಕ್ಕಳ ಸಹಾಯವಾಣಿಗೆ ಕರೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಕೂಡಲೇ ಕಾರ್ಯಪ್ರವೃತ್ತವಾದ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಬಾಲಕ ಇರುವ ಸ್ಥಳಕ್ಕೆ ತೆರಳಿದ್ದಾರೆ.

ಬಾಲಕನನ್ನು ವಿಚಾರಿಸಿದಾಗ ಆತನ ಹೆಸರು ಮಾತ್ರ ಹೇಳುತಿದ್ದ. ತಂದೆ ತಾಯಿ ಮನೆ ವಿಳಾಸ ಗೊತ್ತಿಲ್ಲ ಎನ್ನುತಿದ್ದನು. ಕೂಡಲೇ ಮಹಿಳಾ ಠಾಣೆಗೆ ಮಾಹಿತಿ ನೀಡಿ ತಾತ್ಕಾಲಿಕ ಪುನರ್ವಸತಿ ನೀಡುವಷ್ಟರಲ್ಲಿ ಬಾಲಕನ ತಾಯಿ ಮಹಿಳಾ ಠಾಣೆಗೆ ಬಂದಿದ್ದು, ಮಗ ಮನೆಯಿಂದ ಕಾಣೆಯಾಗಿದ್ದನೆಂದು ದೂರು ನೀಡಲು ಬಂದಿದ್ದರು. ಇದೇ ಬಾಲಕನ ತಾಯಿಯೆಂದು ದೃಢಪಡಿಸಿಕೊಂಡು ಬಾಲಕನನ್ನು ತಾಯಿಯ ವಶಕ್ಕೆ ಮಹಿಳಾ ಠಾಣಾ ಇನ್ಸ್ಪೆಕ್ಟರ್ ವೈಲೆಟ್ ಫೆಮಿನಾ ಅವರ ಸಮಕ್ಷಮದಲ್ಲಿ ನೀಡಲಾಯಿತು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಮಹಿಳಾ ಠಾಣಾ ಸಿಬ್ಬಂದಿ ಜ್ಯೋತಿ, ಮಕ್ಕಳ ಸಹಾಯವಾಣಿಯ ನೇತ್ರ ಮತ್ತು ಜ್ಯೋತಿ ಪಾಲ್ಗೊಂಡಿದ್ದರು.