ಮೂಡಬಿದಿರೆ: ವಿದ್ಯಾರ್ಥಿನಿಗೆ ಕಾರು ಢಿಕ್ಕಿ; ಗಂಭೀರ ಗಾಯ

ಮೂಡುಬಿದಿರೆ: ಮೂಡಬಿದಿರೆಯ ಸಮೀಪದ ಬೆಳುವಾಯಿಯಲ್ಲಿ ಇನ್ನೋವಾ ಕಾರೊಂದು ಕಾಲೇಜು ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಿದ್ಯಾರ್ಥಿನಿ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಬೆಳುವಾಯಿ ಮುಡಾಯಿ ಕಾಡು ನಿವಾಸಿ ಜಗನ್ನಾಥ ಮಡಿವಾಳರ ಪುತ್ರಿ , ಉಡುಪಿ ಹಿರಿಯಡ್ಕ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶುಭಲಕ್ಷ್ಮಿ ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿನಿ. ಸದ್ಯ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಿಗ್ಗೆ ನಾಲ್ವರು ವಿದ್ಯಾರ್ಥಿಗಳು ಕಾರ್ಕಳ ಕಡೆಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದು ಈ ಸಂದರ್ಭದಲ್ಲಿ ಮೂಡುಬಿದಿರೆ ಕಡೆಯಿಂದ ಅತೀ ವೇಗದಿಂದ ಬಂದ ಇನ್ನೋವಾ ಕಾರು ಶುಭಲಕ್ಷ್ಮಿಗೆ ಢಿಕ್ಕಿ ಹೊಡೆದಿದೆ. ಹೊಡೆತಕ್ಕೆ ಶುಭಲಕ್ಷ್ಮಿ ಸುಮಾರು ಹದಿನೈದು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದು ತಲೆ ಮತ್ತು ಪಕ್ಕೆಲುಗಳಿಗೆ ಏಟುಗಳಾಗಿವೆ.
ತಲೆಗೆ ತೀವ್ರತರದ ಏಟು ಬಿದ್ದಿದ್ದರಿಂದ ಮೂಗು‌ ಮತ್ತು ಬಾಯಿಯಿಂದ ರಕ್ತ ಸೋರುತಿತ್ತು ಎನ್ನಲಾಗಿದೆ. ಮೂವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.