ಆಳ್ವಾಸ್ ಕನ್ನಡ ಮಾಧ್ಯಮಕ್ಕೆ ಸತತ 12ನೇ ಬಾರಿಗೆ ಶೇ.100 ಫಲಿತಾಂಶ: 91 ವಿದ್ಯಾರ್ಥಿಗಳಿಗೆ 600ಕ್ಕೂ ಅಧಿಕ ಅಂಕ: ಡಾ. ಮೋಹನ್ ಆಳ್ವ 

ಮೂಡುಬಿದಿರೆ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿದೆ. ಸಂಸ್ಥೆಯು ಸತತ 12ನೇ ಬಾರಿಗೆ ಶೇ. 100 ಫಲಿತಾಂಶ ಪಡೆದಿದೆ.
ಈ ಬಗ್ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪರೀಕ್ಷೆ ಬರೆದ 160 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ ಹಾಗೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಪ್ರಕೃತಿಪ್ರಿಯ ಮತ್ತು ಸಮ್ಮೇದ್ ಮಹಾವೀರ 622 ಅಂಕಗಳೊಂದಿಗೆ ಸಂಸ್ಥೆಯಲ್ಲಿ ಅತ್ಯಧಿಕ ಅಂಕ ಪಡೆದಿದ್ದಾರೆ. ಕಾವ್ಯ ಪಿ ಹಳ್ಳಿ ಮತ್ತು ಶ್ರಾವ್ಯಾ 621 ಅಂಕ ಪಡೆದಿದ್ದಾರೆ. ಸಾಕ್ಷಿರಾಜ್ ಕುಂಬಾರ್ ಹಾಗೂ ರಕ್ಷಿತಾ ದಾನಲಿಂಗ್ 620 ಅಂಕ ಗಳಿಸಿದ್ದಾರೆ ಎಂದರು.
ಆಂಗ್ಲ ಮಾಧ್ಯಮಕ್ಕೆ ಶೇ.99 ಫಲಿತಾಂಶ ಲಭ್ಯವಾಗಿದೆ. 537 ವಿದ್ಯಾರ್ಥಿಗಳ ಪೈಕಿ 531 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆನಂದ ಪಾಟೀಲ್ ಮತ್ತು ರೇಷ್ಮಾ ಎಂ ಪೂಜಾರಿ ತಲಾ 620 ಅಂಕ ಗಳಿಸಿದ್ದಾರೆ ಎಂದು ತಿಳಿಸಿದರು.
ಉಚಿತ ದತ್ತು ಶಿಕ್ಷಣ ಯೋಜನೆಯಡಿ ಶಿಕ್ಷಣ ಪಡೆದ ಶ್ರೀನಿವಾಸ ಸುಡುಗಾಡು ಸಿದ್ಧ 615, ಕಾವ್ಯ ಕುಡುಬಿ 612 ಅಂಕಗಳೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದಾರೆ. ಎರಡೂ ವಿಭಾಗಗಳಲ್ಲಿ 91 ವಿದ್ಯಾರ್ಥಿಗಳು 600ಕ್ಕೂ ಮೇಲ್ಪಟ್ಟ ಅಂಕ ಗಳಿಸಿದ್ದಾರೆ. ವಿಷಯವಾರು ಪೇಪರ್ಸ್ ಗಳ ಪೈಕಿ 365 ಪೇಪರ್ಸ್ ಗಳಲ್ಲಿ ನೂರಕ್ಕೆ ನೂರು ಅಂಕ ಗಳಿಕೆಯ ಸಾಧನೆ ರಾಜ್ಯದಲ್ಲೇ ಶಿಕ್ಷಣ ಸಂಸ್ಥೆಯೊಂದರ ಗಮನಾರ್ಹ ಸಾಧನೆಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಆಳ್ವಾಸ್ ಪ್ರೌಢಶಾಲೆ ಆಡಳಿತಾಧಿಕಾರಿ ಪ್ರಕಾಶ್ ಶೆಟ್ಟಿ, ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರಶಾಂತ್ ಬಿ, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿಜಯ ಟಿ. ಮೂರ್ತಿ, ಪಿಆರ್ ಓ ಡಾ. ಪದ್ಮನಾಭ ಶಣೈ ಉಪಸ್ಥಿತರಿದ್ದರು.