ಪ್ರಧಾನಿ ಮೋದಿ ರಕ್ಷಣೆಗೆ ಮುಧೋಳ ನಾಯಿಗಳ ನಿಯೋಜನೆ: ಛತ್ರಪತಿ ಶಿವಾಜಿ ಮಹಾರಾಜರ ಸೇನೆಯಲ್ಲಿ ಬಳಸಲಾಗಿದ್ದ ಶ್ವಾನಗಳಿಂದ ಪ್ರಧಾನಿಗೆ ಭದ್ರತೆ

ನವದೆಹಲಿ: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಎಸ್.ಪಿ.ಜಿ ಭದ್ರತಾ ತಂಡದಲ್ಲಿ ಇನ್ನು ಮುಂದೆ ಕರ್ನಾಟಕದ ಮುಧೋಳ ನಾಯಿಗಳನ್ನು ನಿಯೋಜಿಸಲಾಗುವುದು ಎಂದು ವರದಿಯಾಗಿದೆ. ಅದರಲ್ಲೂ ಛತ್ರಪತಿ ಶಿವಾಜಿ ಮಹಾರಾಜರ ಸೇನೆಯಲ್ಲಿ ಈ ಮುಧೋಳ ಹೌಂಡ್ ಗಳು ಅಮೋಘ ಶೌರ್ಯ ಮೆರೆದಿತ್ತು. ಇದಲ್ಲದೆ ಭಾರತೀಯ ಸೇನೆಯಲ್ಲಿಯೂ ಮುಧೋಳ ನಾಯಿಗಳ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಇದೀಗ ಈ ನಾಯಿಗಳು ಪ್ರಧಾನಿ ಮೋದಿಯವರ ಭದ್ರತೆಗೆ ಸಿದ್ಧವಾಗಿವೆ ಎನ್ನಲಾಗಿದೆ.

ಉದ್ದನೆಯ ಕಾಲುಗಳನ್ನು ಹೊಂದಿರುವ ತೆಳ್ಳಗಿನ ಅಪ್ಪಟ ದೇಸೀ ನಾಯಿ ಮುಧೋಲ್ ಹೌಂಡ್ ಬೇಟೆಯಾಡುವುದರಲ್ಲಿ ನಿಸ್ಸೀಮ. ಈ ನಾಯಿಯ ತೀಕ್ಷ್ಣ ದೃಷ್ಟಿ, ಗ್ರಹಣ ಶಕ್ತಿ ಮತ್ತು ಸಮಯ ಪ್ರಜ್ಞೆ ಬಹಳ ಹೆಸರುವಾಸಿ. ಇವುಗಳ ಬೇಟೆಯಾಡುವ ಶಕ್ತಿಗಾಗಿಯೆ ಛತ್ರಪತಿ ಶಿವಾಜಿ ಮಹಾರಾಜರು ತನ್ನ ಸೈನ್ಯದಲ್ಲಿ ಈ ನಾಯಿಗಳನ್ನು ಬಳಸುತ್ತಿದ್ದರು. ಆ ಅವಧಿಯಲ್ಲಿ ಅವುಗಳು ಮರಾಠ ಹೌಂಡ್‌ಗಳೆಂದು ಕರೆಯಲ್ಪಡುತ್ತಿದ್ದವು. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯು ಬಲಗೊಂಡ ನಂತರ, ಬ್ರಿಟಿಷರು ತಮ್ಮದೇ ಆದ ಬೇಟೆ ನಾಯಿಗಳನ್ನು ಹೊಂದಿದ್ದರಿಂದ ಈ ಹೌಂಡ್‌ಗಳನ್ನು ಯುದ್ಧದಲ್ಲಿ ಬಳಸುವುದನ್ನು ಕೈಬಿಡಲಾಗಿತ್ತು.

ಆದರೆ ರಾಜಾ ಮಾಲೋಜಿರಾವ್ ಘೋರ್ಪಡೆಯು ತಮ್ಮ ಮುಧೋಳದ ರಾಜಪ್ರಭುತ್ವದ ಅವಧಿಯಲ್ಲಿ ಈ ನಾಯಿಗಳ ತಳಿಯನ್ನು ಪುನರುಜ್ಜೀವನಗೊಳಿಸಿದರು. ಇಂದಿನ ಉತ್ತರ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಈ ನಾಯಿಗಳನ್ನು ಸಾಕಿ ಬೇಟೆಗೆ ಬಳಸುವುದನ್ನು ಘೋರ್ಪಡೆ ಗಮನಿಸಿದ್ದರು ಎಂದು ಇತಿಹಾಸ ಸಂಶೋಧಕರು ಹೇಳುತ್ತಾರೆ.

ಮುಧೋಳ ನಾಯಿಗಳನ್ನು ಈಗ ಪ್ರಧಾನ ಮಂತ್ರಿಗಳ ವಿಶೇಷ ರಕ್ಷಣಾ ಗುಂಪು ಅಥವಾ ಎಸ್‌ಪಿಜಿಗೆ ಸೇರಿಸಲಾಗುವುದು. ಇದಕ್ಕಾಗಿ ನಾಲ್ಕು ತಿಂಗಳ ಕಾಲ ಈ ನಾಯಿಗಳಿಗೆ ಅತ್ಯಂತ ಕಠಿಣ ತರಬೇತಿ ನೀಡಲಾಗುವುದು. ಈ ನಾಯಿಗಳು ತಮ್ಮ ಉತ್ತಮ ಪ್ರತಿರಕ್ಷಣಾ ವ್ಯವಸ್ಥೆಯಿಂದಾಗಿ ಕಡಿಮೆ ದಣಿಯುವುದರಿಂದ ಹಾಗೂ ಉತ್ತಮ ಆರೋಗ್ಯವನ್ನು ಹೊಂದಿರುವುದರಿಂದ ಯಾವುದೇ ಹವಾಮಾನದಲ್ಲಿಯೂ ಕೆಲಸ ಮಾಡುವ ಸಾಮರ್ಥ್ಯ ಹೊಂದಿವೆ.