ಉಡುಪಿ: ಚೆನ್ನೈ ವಿಮಾನ ನಿಲ್ದಾಣದಲ್ಲಿ ಯಾವುದೇ ಅನುಮತಿಯಿಲ್ಲದೆ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆದಿರುವ ಆರೋಪ ಹೊಂದಿರುವ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ವರ್ತನೆ ರಿಯಲ್ ಪಪ್ಪುವಿನಂತಾಗಿದೆ. ಹಿಂದೆ ಒಬ್ಬ ಜವಾಬ್ದಾರಿಯುತ ನಾಯಕರಾದ ರಾಹುಲ್ ಗಾಂಧಿಯವರನ್ನು ಹೀಯಾಳಿಸಿಕೊಂಡು ಕಾಲ ಕಳೆಯುತ್ತಿದ್ದ ಬಿಜೆಪಿಗರಿಗೆ ತೇಜಸ್ವಿ ಸೂರ್ಯನ ವರ್ತನೆ ಯಾವ ರೀತಿ ಕಾಣುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಒಬ್ಬ ಜವಾಬ್ದಾರಿಯುತ ಸಂಸದನಾಗಿ ತಾನು ಹೇಗೆ ವರ್ತಿಸಬೇಕು ಎನ್ನುವ ಕನಿಷ್ಠ ಪ್ರಜ್ಞೆ ಕೂಡ ಇಲ್ಲದ ಇವರು ಕೇವಲ ಮೋದಿಯವರ ಮುಖನೋಡಿ ಇವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ ಬೆಂಗಳೂರಿನ ಜನತೆ ಈಗ ಪಶ್ಚಾತ್ತಾಪ ಪಡಬೇಕಾಗಿದೆ. ಇವರ ಇಂತಹ ಕಪಿಚೇಷ್ಠೆಯಿಂದ ಏನಾದರೂ ಅನಾಹುತ ಸಂಭವಿಸಿದ್ದಲ್ಲಿ ಇದಕ್ಕೆ ಪ್ರಧಾನಿಯವರು ಹೊಣೆ ಹೊರುತ್ತಿದ್ದರೆ? ತೇಜಸ್ವಿ ಸೂರ್ಯ ಅವರಿಗೆ ಸಂಸದ ಸ್ಥಾನ ಒಂದು ರೀತಿಯಲ್ಲಿ ಮಕ್ಕಳ ಕೈಗೆ ಆಟದ ಸಾಮಾನು ಸಿಕ್ಕಂತಾಗಿದೆ. ಆಡುವ ಮಕ್ಕಳಿಗೆ ಸಂಸದನಾಗಿ ಆಯ್ಕೆ ಮಾಡಿದರೆ ಏನಾಗಲಿದೆ ಎಂಬುದಕ್ಕೆ ತೇಜಸ್ವಿ ಸೂರ್ಯ ನಿದರ್ಶನವಾಗಿದೆ. ಈ ಹಿಂದೆ ವಿಮಾನದಲ್ಲಿ ಇಂತಹ ವರ್ತನೆ ತೋರಿದ ಪ್ರಯಾಣಿಕನಿಗೆ ಕಠಿಣ ಶಿಕ್ಷೆ ವಿಧಿಸಿದ್ದು ಸಂಸದ ಎಂಬ ಕಾರಣಕ್ಕಾಗಿ ತೇಜಸ್ವಿ ಸೂರ್ಯ ಅವರು ಕ್ಷಮೆ ಯಾಚಿಸಿದ ಕಾರಣ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ದೇಶದಲ್ಲಿ ಸಾಮಾನ್ಯರಿಗೊಂದು ನ್ಯಾಯ ದೊಡ್ಡವರಿಗೆ ಒಂದು ನ್ಯಾಯ ಎನ್ನುವುದನ್ನು ತೋರಿಸಿಕೊಡುತ್ತದೆ.
ತೇಜಸ್ವಿ ಸೂರ್ಯ ಅವರ ಇಂತಹ ಕಪಿಚೇಷ್ಠೆ ಇದೇ ಮೊದಲಲ್ಲ ಈ ಹಿಂದೆ ಉದ್ಯಾನ ನಗರಿ ಬೆಂಗಳೂರು, ನೈಋತ್ಯ ಮುಂಗಾರು ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿ ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಟ ನಡೆಸುತ್ತಿದ್ದ ಸಮಯದಲ್ಲಿ ಸಂಸದ ಸೂರ್ಯ ಅವರು ಪದ್ಮನಾಭನಗರದ ಹೋಟೆಲ್‌ನಲ್ಲಿ ಮಸಾಲೆ ದೋಸೆ ತಿನ್ನುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಮೂಲಕ ಇವರು ಸಂಸದ ಸ್ಥಾನಕ್ಕೆ ಎಷ್ಟೊಂದು ಅರ್ಹರು ಎನ್ನುವುದು ಇವರ ವರ್ತನೆಯಿಂದ ಎದ್ದು ಕಾಣುತ್ತದೆ ಎಂದು ಪ್ರಖ್ಯಾತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.