ಮಾಹೆ ಮತ್ತು ಬಿಂಗ್‌ಹ್ಯಾಮ್‌ಟನ್ ವಿಶ್ವವಿದ್ಯಾಲಯದ ನಡುವೆ ತಿಳುವಳಿಕೆ ಒಪ್ಪಂದ

ಮಣಿಪಾಲ: ಎರಡು ಸಂಸ್ಥೆಗಳ ನಡುವೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರವನ್ನು ಸ್ಥಾಪಿಸಲು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್ (ಮಾಹೆ) ಮತ್ತು ಬಿಂಗ್‌ಹ್ಯಾಂಟನ್ ವಿಶ್ವವಿದ್ಯಾಲಯ, ನ್ಯೂ ಯಾರ್ಕ್ ಏಪ್ರಿಲ್ 28 ರಂದು ಮಣಿಪಾಲ ವಿಶ್ವವಿದ್ಯಾಲಯ ಕಟ್ಟಡದಲ್ಲಿ ತಿಳುವಳಿಕೆ ಒಪ್ಪಂದ(ಎಂಒಯು)ಕ್ಕೆ ಸಹಿ ಹಾಕಿದವು.

ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಹಯೋಗದ ಪದವಿ ಕಾರ್ಯಕ್ರಮವನ್ನು ಸ್ಥಾಪಿಸುವುದು ಎಂಒಯು ಉದ್ದೇಶವಾಗಿದೆ. ವಿದ್ಯಾರ್ಥಿಗಳು ತಲಾ ಮೂರೂವರೆ ವರ್ಷ ಮಣಿಪಾಲದ ಎಂಐಟಿ ಯಲ್ಲಿಯೂ ಒಂದೂವರೆ ವರ್ಷ ಬಿಂಗ್‌ಹ್ಯಾಂಟನ್ ವಿಶ್ವವಿದ್ಯಾಲಯದಲ್ಲಿಯೂ ವಿದ್ಯಾಭ್ಯಾಸ ಪಡೆಯಲು ಈ ಒಪ್ಪಂದ ಅನುವು ಮಾಡಿಕೊಡುತ್ತದೆ. ಈ ರೀತಿ ವಿದ್ಯಾರ್ಥಿಯು ಎಂಐಟಿಯಿಂದ ಬ್ಯಾಚುಲರ್ ಪದವಿಯನ್ನೂ ಬಿಂಗ್‌ಹ್ಯಾಂಟನ್ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಪದವಿಯನ್ನೂ ಏಕಕಾಲದಲ್ಲಿ ಪಡೆಯಬಹುದಾಗಿದೆ.

ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಮತ್ತು ವೈಸ್ ಪ್ರೊವೊಸ್ಟ್ ಇಂಟರ್ನ್ಯಾಷನಲ್ ಎಜುಕೇಶನ್ & ಗ್ಲೋಬಲ್ ಅಫೇರ್ಸ್ ಬಿಂಗ್‌ಹ್ಯಾಂಟನ್ ವಿಶ್ವವಿದ್ಯಾಲಯದ ಡಾ.ಮಧುಸೂಧನ್ ಗೋವಿಂದರಾಜು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.