ಉಡುಪಿ: ರಾಷ್ಟ್ರೀಯ ಪದವಿಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘ ಮತ್ತು ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ಯಶಸ್ವಿ- ಭವಿಷ್ಯದ ಧ್ರುವತಾರೆ ವೃತ್ತಿ ಮಾರ್ಗದರ್ಶನ ಯೋಜನೆಯು ಸೆಪ್ಟೆಂಬರ್ 4 ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ 1000 ಕ್ಕೂ ಮಿಕ್ಕಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಉಡುಪಿ ಜಿಲ್ಲೆಯ ಮೂರು ತಾಲೂಕುಗಳಾದ ಉಡುಪಿ, ಕಾಪು ಮತ್ತು ಬ್ರಹ್ಮಾವರದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ, ಸಂಸ್ಥೆಗಳ ಉಪಕ್ರಮವನ್ನು ಶ್ಲಾಘಿಸಿ, ಈ ಎರಡೂ ಸಂಸ್ಥೆಗಳು ರಾಷ್ಟ್ರದ ಭವಿಷ್ಯದ ಆಸ್ತಿಯನ್ನು ಗೌರವಿಸುವ ಕಾರ್ಯವನ್ನು ಮಾಡುತ್ತಿವೆ. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಮತ್ತು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕು ಎಂದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಸರಕಾರವು ಶಿಕ್ಷಣಕ್ಕೆ ಹಲವು ರೀತಿಯ ಉತ್ತೇಜನಗಳನ್ನು ನೀಡುತ್ತಿದೆ. ಜನರ ಬಳಿಗೆ ಅವುಗಳನ್ನು ತಲುಪಿಸುವ ಕಾರ್ಯಗಳನ್ನು ಇಂತಹ ಸಂಘಟನೆಗಳು ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸತೀಶ್ ಪೂಜಾರಿ, ಅಲೆನ್ ಕೆರಿಯರ್ ಇನ್ಸ್ಟಿಟ್ಯೂಟ್, ಮಂಗಳೂರು ಮತ್ತು ಶ್ರೀ ಮುರಳಿ, ಎಕ್ಸೆಲ್ ಅಕಾಡೆಮಿಕ್ಸ್, ಬೆಂಗಳೂರು ಇವರು ಕಾರ್ಯಕ್ರಮದಲ್ಲಿ ಸೇರಿದ್ದ 2000 ವಿದ್ಯಾರ್ಥಿ ಮತ್ತು ಪೋಷಕರಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಸಮಿತಿಯ ಸಂಸ್ಥಾಪಕ, ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯವನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಸಮಾಜ ಶ್ರಮಿಸಬೇಕು ಎಂದರು.
ರಾಷ್ಟ್ರೀಯ ಪದವಿಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘ ಸ್ಥಾಪಕ ಮಿಥೇಶ್ ಕುಮಾರ್ ಮೂಡುಕೊಣಾಜೆ, ಏಕನಾಥ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಗಣೇಶ್ ದೇವಾಡಿಗ, ಕೊಡವೂರು ಸಿಎ ಬ್ಯಾಂಕ್ ಅಧ್ಯಕ್ಷ ನಾರಾಯಣ ಬಲ್ಲಾಳ್, ಉದ್ಯಮಿ ಶಿರಿಯಾರ ಗಣೇಶ್ ನಾಯಕ್, ನಟ ವಿನೀತ್ ಕುಮಾರ್, ಕೊಲ್ಲೂರು ದೇವಸ್ಥಾನದ ಟ್ರಸ್ಟಿ ಸಂಧ್ಯಾ ರಮೇಶ್ ಉಪಸ್ಥಿತರಿದ್ದರು.
ವಿಜಯ್ ಕೊಡವೂರು ಸ್ವಾಗತಿಸಿದರು. ಅನುಪಮಾ ಅಡಿಗ ವಂದಿಸಿದರು. ದಾಮೋದರ ಶರ್ಮ ನಿರೂಪಿಸಿದರು.
ಅಲೆನ್ ಕೆರಿಯರ್ ಇನ್ಸ್ಟಿಟ್ಯೂಟ್, ಮಂಗಳೂರು ಮತ್ತು ಎಕ್ಸೆಲ್ ಅಕಾಡೆಮಿಕ್ಸ್, ಬೆಂಗಳೂರು ಇವರು ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.












