ಅಥೆನ್ಸ್: ಜೂನ್ 14 ರಂದು ನೂರಾರು ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಮೀನುಗಾರಿಕಾ ದೋಣಿಯೊಂದು ಗ್ರೀಸ್ ಕರಾವಳಿಯಲ್ಲಿ ಮುಳುಗಿದ ಬಳಿಕ ಸುಮಾರು 500 ಜನರು ನಾಪತ್ತೆಯಾಗಿದ್ದಾರೆ ಎಂದು ಅಮೆರಿಕ ಏಜೆನ್ಸಿಗಳು ತಿಳಿಸಿವೆ.
ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಮತ್ತು ಯುಎನ್ ನಿರಾಶ್ರಿತರ ಸಂಸ್ಥೆ (ಯುಎನ್ಎಚ್ಸಿಆರ್) ಶುಕ್ರವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ದೋಣಿಯಲ್ಲಿದ್ದ ಜನರ ಸಂಖ್ಯೆ ಸ್ಪಷ್ಟವಾಗಿ ತಿಳಿದುಬಂದಿಲ್ಲವಾದರೂ 400 ರಿಂದ 750 ಮಂದಿ ಪ್ರಯಾಣಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದೆ.
ಜೂನ್ 14 ರಂದು ಗ್ರೀಸ್ ಕರಾವಳಿಯಲ್ಲಿ ನಡೆದ ದೋಣಿ ದುರಂತಕ್ಕೆ ಸಂಬಂಧಿಸಿದಂತೆ ಇದುವರೆಗೆ 104 ಅನ್ನು ರಕ್ಷಿಸಲಾಗಿದ್ದು, 78 ಮೃತದೇಹಗಳು ದೊರೆತಿವೆ. ಆದರೆ ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಏಜೆನ್ಸಿಗಳು ತಿಳಿಸಿವೆ.
ನೈಋತ್ಯ ಕರಾವಳಿಯಿಂದ ಸುಮಾರು 50 ನಾಟಿಕಲ್ ಮೈಲು ದೂರದಲ್ಲಿ ದೋಣಿ ಮುಳುಗಿದ ಸ್ಥಳದಿಂದ ರಕ್ಷಣಾ ತಂಡದವರು ಶೋಧ ಕಾರ್ಯ ಪ್ರಾರಂಭಿಸಿದ್ದರು. ಇಲ್ಲಿಯವರೆಗೆ 104 ಜನರನ್ನು ರಕ್ಷಿಸಲಾಗಿದೆ ಮತ್ತು 78 ಮೃತದೇಹಗಳು ಪತ್ತೆಯಾಗಿವೆ, ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ.
ಜೂನ್ 14 ರ ಬೆಳಗ್ಗೆ ದೋಣಿ ಮುಳುಗಿದ ನಂತರ ಗ್ರೀಕ್ ಹೆಲೆನಿಕ್ ಕೋಸ್ಟ್ ಗಾರ್ಡ್ ದೊಡ್ಡ ಪ್ರಮಾಣದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡಿತ್ತು. ಸಮುದ್ರದ ಮಧ್ಯೆ ಸಂಕಷ್ಟಕ್ಕೆ ಸಿಲುಕಿದ ಜನರನ್ನು ರಕ್ಷಿಸುವುದು ಅಂತಾರಾಷ್ಟ್ರೀಯ ಕಡಲ ಕಾನೂನಿನ ಮೂಲ ನಿಯಮವಾಗಿದೆ. ರಾಷ್ಟ್ರೀಯತೆಯನ್ನು ಲೆಕ್ಕಿಸದೆಯೇ ಹಡಗು ಮಾಲೀಕರು ಮತ್ತು ರಾಜ್ಯಗಳೆರಡೂ ಸಮುದ್ರದಲ್ಲಿ ಸಂಕಟದಲ್ಲಿರುವವರಿಗೆ ಸಹಾಯ ಮಾಡುವುದು ಬಾಧ್ಯತೆಯಾಗಿದೆ.
ಮಧ್ಯಪ್ರಾಚ್ಯ, ಏಷ್ಯಾ ಮತ್ತು ಆಫ್ರಿಕಾದಿಂದ ನಿರಾಶ್ರಿತರು ಮತ್ತು ವಲಸಿಗರು ಯುರೋಪಿಯನ್ ಯೂನಿಯನ್ಗೆ ತೆರಳಲು ಗ್ರೀಸ್ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ಕಳೆದ ತಿಂಗಳು, ಗ್ರೀಕ್ ಸರ್ಕಾರವು ಸಮುದ್ರದಲ್ಲಿ ಅಲೆದಾಡುವ ವಲಸಿಗರನ್ನು ಬಲವಂತವಾಗಿ ಹೊರಹಾಕಿದ ವಿಡಿಯೋವೊಂದು ಅಂತಾರಾಷ್ಟ್ರೀಯ ಟೀಕೆಗೆ ಒಳಗಾಗಿತ್ತು.
ಈ ಮಧ್ಯೆ ಗ್ರೀಕ್ ಉಸ್ತುವಾರಿ ಪ್ರಧಾನ ಮಂತ್ರಿ ಐಯೋನಿಸ್ ಸರ್ಮಾಸ್ ಪ್ರತಿಕ್ರಿಯೆ ನೀಡಿ, “ದೋಣಿ ಮುಳುಗಲು ಕಾರಣ ಏನೆಂಬುದನ್ನು ತಿಳಿಯಲು ತನಿಖೆ ಮುಂದುವರೆದಿದೆ. ನೈಜ ಸಂಗತಿಗಳು ಮತ್ತು ತಾಂತ್ರಿಕ ದೋಷದ ಕುರಿತು ಸಂಪೂರ್ಣ ತನಿಖೆ ನಡೆಯುತ್ತದೆ” ಎಂದು ಹೇಳಿದರು.
“ದೋಣಿಯು ಈಜಿಪ್ಟ್ನಿಂದ ಖಾಲಿಯಾಗಿ ಹೊರಟು ಲಿಬಿಯಾದ ಟೊಬ್ರೂಕ್ ಬಂದರಿನಲ್ಲಿ ನಿಲ್ಲಿಸಿತು. ಬಳಿಕ, ಅಲ್ಲಿಂದ ಇಟಲಿಗೆ ಹೊರಡಲು ಉದ್ದೇಶಿಸಲಾದ ವಲಸಿಗರನ್ನು ಕರೆದುಕೊಂಡು ಹೋಗಲಾಗಿದೆ” ಎಂದು ಗ್ರೀಕ್ ಮಾಧ್ಯಮಗಳು ವರದಿ ಮಾಡಿವೆ. UNHCR ಮತ್ತು IOM ಎರಡೂ ದಕ್ಷಿಣ ಗ್ರೀಸ್ನ ಕಲಾಮಾಟಾದಲ್ಲಿದ್ದು, ಆಹಾರೇತರ ವಸ್ತುಗಳು, ನೈರ್ಮಲ್ಯದ ಕಿಟ್, ಆಘಾತಕ್ಕೊಳಗಾಗಿ ಬದುಕುಳಿದವರ ಜೊತೆ ಸಮಾಲೋಚನೆ ಸೇರಿದಂತೆ ಸಂತ್ರಸ್ತರಿಗೆ ಬೆಂಬಲ ಮತ್ತು ಸಹಾಯವನ್ನು ಒದಗಿಸುವ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ.












