ಮೂಡಬಿದ್ರೆ: ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದು ಬಿದ್ದ ಸೇತುವೆ, ಉರುಳಿದ ಪಲ್ಲಕ್ಕಿ, ಹಲವರಿಗೆ ಗಂಭೀರ ಗಾಯ!

ಮೂಡಬಿದ್ರೆ: ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಬಾವದಬೈಲು ಎಂಬಲ್ಲಿ ದೈವದ ಭಂಡಾರ ಮೆರವಣಿಗೆ ವೇಳೆ ಸೇತುವೆ ಕುಸಿದು ಬಿದ್ದು ಹಲವರಿಗೆ ಗಂಭೀರ ಗಾಯಗಳಾದ ಭೀಕರ ಘಟನೆ ಸಂಭವಿಸಿದೆ.

ಸಂಪ್ರದಾಯದಂತೆ ನಡೆಯುತ್ತಿದ್ದ ದೈವದ ಭಂಡಾರ ಮೆರವಣಿಗೆಯ ವೇಳೆ ಕಾಲು ಸಂಕ (ಸಣ್ಣ ಸೇತುವೆ) ಏಕಾಏಕಿ ಕುಸಿದ ಪರಿಣಾಮ ಪಲ್ಲಕ್ಕಿ ಉರುಳಿ ಬಿದ್ದಿದೆ. ಭಕ್ತರು ಭುಜದ ಮೇಲೆ ಹೊತ್ತು ಸಾಗಿಸುತ್ತಿದ್ದ ಪಲ್ಲಕ್ಕಿ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದು, ಸೇತುವೆಯ ಬೀಮ್ ಕೂಡ ಪಲ್ಲಕ್ಕಿ ಹೊತ್ತವರ ಮೇಲೆ ಬಿದ್ದ ಕಾರಣ ಗಾಯಗಳ ಪ್ರಮಾಣ ಹೆಚ್ಚಾಗಿದೆ.

ಈ ದುರ್ಘಟನೆಯಲ್ಲಿ ಸುನಿಲ್ ಶೆಟ್ಟಿ ಮುಕಾಲ್ದಿ (ಮಾರೂರು), ಲೋಕೇಶ್ ಭಂಡಾರಿ ಸೇರಿದಂತೆ ಒಟ್ಟು 8 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರಿಗೆ ಸಣ್ಣ ಗಾಯಗಳಾಗಿದ್ದರೆ, ಇನ್ನೂ ಕೆಲವರಿಗೆ ಗಂಭೀರ ಗಾಯಗಳಾಗಿರುವ ಮಾಹಿತಿ ಲಭ್ಯವಾಗಿದೆ.

ಮೂರ್ತಿಗೂ ಹಾನಿ, ಭಕ್ತರ ಕಳವಳ

ಅವಘಡದಲ್ಲಿ ಪಲ್ಲಕ್ಕಿಯಲ್ಲಿದ್ದ ಮೊಗಮೂರ್ತಿ ಹಾಗೂ ಇತರ ಧಾರ್ಮಿಕ ಪರಿಕರಗಳಿಗೂ ಹಾನಿಯಾಗಿದೆ. ದೈವದ ಭಂಡಾರ ಮತ್ತು ಸಂಬಂಧಿತ ಆಭರಣಗಳು ಭಕ್ತರ ನಂಬಿಕೆಯ ಪ್ರತೀಕವಾಗಿರುವುದರಿಂದ, ಈ ಹಾನಿ ಭಕ್ತರಲ್ಲಿ ದುಃಖ ಉಂಟುಮಾಡಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೆರವಣಿಗೆಯ ಉತ್ಸಾಹದ ಮಧ್ಯೆ ಸೇತುವೆ ಕುಸಿದು ಪಲ್ಲಕ್ಕಿ ಉರುಳುವ ದೃಶ್ಯಗಳು ಎಲ್ಲರನ್ನೂ ಕಳವಳಗೊಳಿಸಿವೆ.

ಈ ಘಟನೆ ನಂತರ ಸ್ಥಳೀಯರು ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರವಾಗಿ ಚಿಂತನೆ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಮೆರವಣಿಗೆಗಳು ನಡೆಯುವ ಮಾರ್ಗದಲ್ಲಿನ ಸೇತುವೆಗಳು, ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಮುಂಚಿತವಾಗಿ ಪರಿಶೀಲಿಸಿ, ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.