ಕೇರಳಕ್ಕೆ ಮುಂಚಿತವಾಗಿ ಆಗಮಿಸಿದ ಮಾನ್ಸೂನ್: ಜೂನ್ 2 ರೊಳಗೆ ಕರ್ನಾಟಕಕ್ಕೆ ಮುಂಗಾರು ಮಳೆಯ ಸಿಂಚನ

ಬೆಂಗಳೂರು: ನೈಋತ್ಯ ಮಾನ್ಸೂನ್ ನಿಗದಿತ ಸಮಯಕ್ಕಿಂತ ಮೂರು ದಿನಗಳ ಮುಂಚಿತವಾಗಿ ಭಾನುವಾರವೆ ಕೇರಳಕ್ಕೆ ಆಗಮಿಸಿದ್ದು, ಜೂನ್ 2 ರ ವೇಳೆಗೆ ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ. ಇದು ನಾಲ್ಕು ತಿಂಗಳ ಅವಧಿಯ ಸಾಮಾನ್ಯ ಮಳೆಗಾಲದ ಮುನ್ಸೂಚನೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕೇರಳ, ತಮಿಳುನಾಡು, ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಭಾರೀ ಮಳೆ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಬೆಳಿಗ್ಗೆ 8.30 ಕ್ಕೆ ದಾಖಲಿಸಿದ ಮಾಹಿತಿಯು ತೋರಿಸಿದೆ. ಕೇರಳದ 14 ಹವಾಮಾನ ಕೇಂದ್ರಗಳಲ್ಲಿ ಕನಿಷ್ಠ 10 ಮತ್ತು ಲಕ್ಷದ್ವೀಪದ ಒಂದು ಕೇಂದ್ರವು 2.5 ಮಿಮೀ ಅಥವಾ ಅದಕ್ಕಿಂತ ಹೆಚ್ಚಿನ ಮಳೆಯನ್ನು ಪಡೆದಿದೆ, ಇದು ನೈಋತ್ಯ ಮಾನ್ಸೂನ್‌ನ ಪ್ರಾರಂಭದ ಪ್ರಮುಖ ಮಾನದಂಡವನ್ನು ಪೂರೈಸುತ್ತದೆ ಎಂದು ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಲಾಖೆಯ ಅಂಕಿಅಂಶಗಳ ಪ್ರಕಾರ, ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ನೈಋತ್ಯ ಮಾನ್ಸೂನ್ ಕರ್ನಾಟಕದ ಭಾಗಗಳಿಗೆ ಮತ್ತು ಇತರೆಡೆಗಳಿಗೆ ಆಗಮಿಸಲು ಪರಿಸ್ಥಿತಿ ಅನುಕೂಲಕರವಾಗಿದೆ. ಮಾನ್ಸೂನ್‌ನ ಸಾಮಾನ್ಯ ಆಗಮನದ ದಿನಾಂಕವು ಕೇರಳದಲ್ಲಿ ಜೂನ್ 1 ಮತ್ತು ಕರ್ನಾಟಕದಲ್ಲಿ ಜೂನ್ 5 ಆಗಿದೆ. ಕೇರಳದಲ್ಲಿ ಈಗಾಗಲೇ ಮುಂಗಾರು ಮಳೆಯ ಆಗಮನವಾಗಿದ್ದು, ಕರ್ನಾಟಕವು ಇದನ್ನು ಅನುಸರಿಸುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಐಎಂಡಿಯ ಹವಾಮಾನ ಕೇಂದ್ರದ ವಿಜ್ಞಾನಿ-ಡಿ ಎ ಪ್ರಸಾದ್ ಹೇಳಿದ್ದಾರೆ.