ಇನ್‌ಸ್ಟಾಗ್ರಾಮ್’ನಲ್ಲಿ ಮೋದಿ ರೀಲ್ಸ್ ವಿಡಿಯೋ ಭಾರೀ ವೈರಲ್, ಯುವ ಜನತೆಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

ನವದೆಹಲಿ: ರಾಷ್ಟ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ದಂಧೆಗೆ ಕೇಂದ್ರ ಸಚಿವ ಸಂಪುಟವು ಅತ್ಯಂತ ಕಠಿಣವಾದ ಮಸೂದೆಗೆ ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ತಮ್ಮ ಮೊದಲ ವಿಡಿಯೋ ಸಂದೇಶಕ್ಕೆ ದೇಶದ ಯುವಜನತೆಯಿಂದ ವ್ಯಕ್ತವಾದ ರಚನಾತ್ಮಕ ಸಲಹೆಗಳು ಮತ್ತು ಪ್ರತಿಕ್ರಿಯೆಗಳಿಗಾಗಿ ಹೃತ್ಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಕ್ರಮ ಕೈಗೊಳ್ಳುವ ಕುರಿತು ಪ್ರಧಾನಿ ಮೋದಿ ಗುರುವಾರ ತಡರಾತ್ರಿ ಹಂಚಿಕೊಂಡಿದ್ದ ಮೊದಲ ಇನ್‌ಸ್ಟಾಗ್ರಾಮ್ ರೀಲ್ಸ್ ವಿಡಿಯೋ ಭಾರಿ ವೈರಲ್ ಆಗಿದ್ದು, ಕೇವಲ 24 ಗಂಟೆಗಳಲ್ಲಿ 303 ಮಿಲಿಯನ್ (30.3 ಕೋಟಿ) ವೀಕ್ಷಣೆ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ವಿಶ್ವ ದಾಖಲೆ ಬರೆದಿದೆ.

ಯುವ ಜನತೆಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ:
ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಎರಡನೇ ವಿಡಿಯೋ ಹಂಚಿಕೊಂಡಿರು ಮೋದಿಯವರು, ಸ್ನೇಹಿತರೇ, ಮಧ್ಯರಾತ್ರಿಯಲ್ಲಿ ನಿಮ್ಮೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. ನನ್ನ ವಿಡಿಯೋಗೆ ನೀವು ನೀಡಿರುವ ಸಕಾರಾತ್ಮಕ ಸಲಹೆಗಳು ಮತ್ತು ತೋರಿರುವ ಪ್ರೀತಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

“ಧನ್ಯವಾದಗಳು ಸ್ನೇಹಿತರೇ. ಮಧ್ಯರಾತ್ರಿಯಲ್ಲಿ ನಿಮ್ಮೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. ನನ್ನ ವಿಡಿಯೊಗೆ ನೀವು ನೀಡಿದ ಪ್ರತಿಕ್ರಿಯೆ ಮತ್ತು ಅಮೂಲ್ಯ ಸಲಹೆಗಳಿಗೆ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ ಹೀಗೆಯೇ ಮುಂದುವರಿಯಲಿ. ನಮ್ಮ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ. ಧನ್ಯವಾದಗಳು, ಧನ್ಯವಾದಗಳು ಸ್ನೇಹಿತರೇ,” ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

ಯುವಕರು ಹಾಗೂ ಜನರೇಷನ್-Z ಹೆಚ್ಚು ಬಳಸುವ ಇನ್‌ಸ್ಟಾಗ್ರಾಂ ಮೂಲಕ ಸರ್ಕಾರ ಯುವಜನರ ಕಲ್ಯಾಣ ಮತ್ತು ಭವಿಷ್ಯಕ್ಕಾಗಿ ಕೈಗೊಂಡಿರುವ ಕ್ರಮಗಳನ್ನು ನೇರವಾಗಿ ತಿಳಿಸಲು ಪ್ರಧಾನಿ ಮುಂದಾಗಿದ್ದಾರೆ.

ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲೂ ಪ್ರಧಾನಿ ಮೋದಿ, ಸಚಿವರು ಇನ್‌ಸ್ಟಾಗ್ರಾಂನಲ್ಲಿ ಇನ್ನಷ್ಟು ಸಕ್ರಿಯರಾಗುವಂತೆ ಹಾಗೂ ರಾಷ್ಟ್ರೀಯ ಬೆಳವಣಿಗೆಗಳು ಮತ್ತು ಯುವಜನರ ಭವಿಷ್ಯದ ಕುರಿತು ಸರ್ಕಾರದ ಬದ್ಧತೆಯನ್ನು ಜನರಿಗೆ ತಿಳಿಸುವಂತೆ ಸೂಚನೆ ನೀಡಿದರು.

ಇದೇ ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಸರ್ಕಾರ ಕಠಿಣ ನಿಲುವು ಮುಂದುವರಿಸುವುದಾಗಿ ಪುನರುಚ್ಚರಿಸಿದ ಪ್ರಧಾನಿ, ಗುರುವಾರವೇ ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.

ಇದೇ ವೇಳೆ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆಗೆ ದೆಹಲಿ ಪೊಲೀಸರು ವಿಶೇಷ ಕಾರ್ಯಪಡೆ (Special Task Force – STF)ಯನ್ನು ರಚಿಸಿದ್ದಾರೆ.