ಮೋದಿಯಿಂದ ದೇಶ ಉದ್ದಾರವಾಗಿದೆ:ಶೋಭಾಕರಂದ್ಲಾಜೆ

ಉಡುಪಿ: ಮೋದಿ ಅವರಿಂದ ದೇಶ ಉದ್ದಾರವಾಗಿದೆ. ದೇಶದ ರಕ್ಷಣೆಗೆ ಒತ್ತುನೀಡಿದ್ದು, ಭಯೋತ್ಪಾದಕರನ್ನು ಮಟ್ಟಹಾಕಲಾಗುತ್ತಿದೆ. ಹಾಗಾಗಿ, ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಬಿಜೆಪಿಗೆ ಮತಹಾಕಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು   ಕೊಂಡಕೂರು ವಾರ್ಡ್‌ನಲ್ಲಿ ಕಾರ್ಯಕರ್ತರ ಸಭೆ ಹಾಗೂ ಚಾಯ್‌ಪೇ ಚರ್ಚಾ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಉಡುಪಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ನಿಧಾನಗತಿಯಲ್ಲಿ ಕಾಮಗಾರಿ ನಡೆಸುತ್ತಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ ಎಂದರು.

ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತಿತಿಂಗಳು ರೂ 3000 ಪಿಂಚಣಿ ನೀಡುವ ಯೋಜನೆಯನ್ನು ಕೇಂದ್ರ ಜಾರಿಗೊಳಿಸಿದೆ ಎಂದರು.

ಶಾಸಕ ರಘುಪತಿ ಭಟ್ ಮಾತನಾಡಿ, ‘ವಿ.ಎಸ್‌.ಆಚಾರ್ಯ ಅವರ ಆಡಳಿತಾವಧಿಯಲ್ಲಿ ದಿನದ 24 ಗಂಟೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಅದರಂತೆ ಉಡುಪಿ ನಗರದಲ್ಲಿ ನಿರಂತರ ನೀರು ಕೊಡುವ ಜವಾಬ್ದಾರಿ ಬಿಜೆಪಿಯದ್ದು  ಎಂದರು.

 ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ರೂ. 2,500 ಕೋಟಿ ಅನುದಾನ ತಂದಿರುವುದಾಗಿ ಪ್ರಮೋದ್ ಮಧ್ವರಾಜ್ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಬೇಕು ಎಂದರು.

ಬಿಜೆಪಿ ನಗರ ಅಧ್ಯಕ್ಷ ಪ್ರಭಾಕರ್ ಪೂಜಾರಿ, ವಾರ್ಡ್‌ ಸಮಿತಿ ಕಾರ್ಯದರ್ಶಿ ಮನೋಜ್ ಕೊಡಂಕೂರು, ಪ್ರಶಾಂತ್ ಪೂಜಾರಿ, ಅಂಬರೀಶ್, ನಗರಸಭಾ ಸದಸ್ಯ ಸಂತೋಷ್ ಪೂಜಾರಿ, ಕಕ್ಕುಂಜೆ ಬಾಲಕೃಷ್ಣ ಶೆಟ್ಟಿ, ಸಂಪಾವತಿ ಕೊಡಂಕೂರು, ವಿಜಯ್‌ ಕೊಡವೂರು, ಜಯಂತಿ ಪೂಜಾರಿ ಇದ್ದರು.

ಮಣಿಪಾಲದ ಮಾಹೆ ವಿಶ್ವವಿದ್ಯಾಲಯಕ್ಕೆ ತೆರಳಿದ ಶೋಭಾ ಕರಂದ್ಲಾಜೆ ಅಲ್ಲಿನ ಸಿಬ್ಬಂದಿಗಳ ಬಳಿ ಮತಯಾಚನೆ ಮಾಡಿದರು. ಮೋದಿ ಸರ್ಕಾರದ ಆಡಳಿತದ ಬಗ್ಗೆ ಸಿಬ್ಬಂದಿ ಬಳಿ ಚರ್ಚಿಸಿದರು.