ಗುಜರಿ ಮಾರಾಟದಿಂದ ಬರೋಬ್ಬರಿ 1,163 ಕೋಟಿ ರೂ ಗಳಿಸಿದ ಕೇಂದ್ರ ಸರ್ಕಾರ!!

ನವದೆಹಲಿ: ಈ ವರದಿಯನ್ನು ನಂಬಿದರೆ ನಂಬಿ ಅಥವಾ ಬಿಟ್ಟರೆ ಬಿಡಿ, ನರೇಂದ್ರ ಮೋದಿ ಸರ್ಕಾರವು ಇಲಾಖೆಗಳ ಕಡತ, ಕಚೇರಿ ಉಪಕರಣಗಳು ಮತ್ತು ಬಳಕೆಯಲ್ಲಿಲ್ಲದ ವಾಹನಗಳನ್ನು ಮಾರಾಟ ಮಾಡುವ ಮೂಲಕ ಬರೋಬ್ಬರಿ 1,163 ಕೋಟಿ ರೂ ಆದಾಯ ಗಳಿಕೆ ಮಾಡಿದೆ! ಆಡಳಿತ ಸುಧಾರಣಾ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಈ ಅಭಿಯಾನದ ನೇತೃತ್ವ ವಹಿಸಿದೆ.

ಇದು ಭಾರತದ ಎರಡು ಚಂದ್ರಯಾನ ಯೋಜನೆಗಳಿಗೆ ಖರ್ಚು ಮಾಡಬಹುದಾದ ಒಟ್ಟು ಮೊತ್ತವಾಗಿದೆ. ಭಾರತದ ಯಶಸ್ವಿ ಚಂದ್ರಯಾನ-3 ಮಿಷನ್ ಸುಮಾರು 600 ಕೋಟಿ ರೂ ವೆಚ್ಚವಾಗಿದೆ.

ಇತ್ತೀಚಿನ ಸರ್ಕಾರದ ವರದಿಯು ಅಕ್ಟೋಬರ್ 2021 ರಿಂದ ಸುಮಾರು 1,163 ಕೋಟಿ ರೂಪಾಯಿಗಳನ್ನು ಗುಜರಿ ಮಾರಾಟದಿಂದ ಗಳಿಸಿದೆ ಎಂದು ಹೇಳಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಒಂದು ತಿಂಗಳ ಅವಧಿಯ ವ್ಯಾಪಕ ಪ್ರಚಾರದ ಸಮಯದಲ್ಲಿ 557 ಕೋಟಿ ರೂ. ಗಳಿಸಿದೆ. ಅಕ್ಟೋಬರ್ 2021 ರಿಂದ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ 96 ಲಕ್ಷ ಭೌತಿಕ ಕಡತಗಳನ್ನು ವಿಲೇ ಮಾಡಲಾಗಿದೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸುಮಾರು 355 ಲಕ್ಷ ಚದರ ಅಡಿ ಜಾಗವನ್ನು ಮುಕ್ತಗೊಳಿಸಲಾಗಿದೆ ಎಂದು ವರದಿ ಹೇಳುತ್ತದೆ. ಇದು ಕಛೇರಿಗಳಲ್ಲಿನ ಕಾರಿಡಾರ್‌ಗಳನ್ನು ಸ್ವಚ್ಛಗೊಳಿಸಲು, ಮುಕ್ತ ಸ್ಥಳವನ್ನು ಮನರಂಜನಾ ಕೇಂದ್ರಗಳಾಗಿ ಮತ್ತು ಇತರ ಉಪಯುಕ್ತ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಕಾರಣವಾಗಿದೆ.

ಈ ವರ್ಷ ಸರ್ಕಾರವು ಗುಜರಿ ಮಾರಾಟದಿಂದ ಗಳಿಸಿದ 556 ಕೋಟಿ ರೂಪಾಯಿಗಳಲ್ಲಿ ಸುಮಾರು 225 ಕೋಟಿ ರೂಪಾಯಿಗಳನ್ನು ರೈಲ್ವೇ ಸಚಿವಾಲಯದಿಂದಲೇ ಗಳಿಸಿದೆ. ರಕ್ಷಣಾ ಸಚಿವಾಲಯ 168 ಕೋಟಿ ರೂ., ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ 56 ಕೋಟಿ ರೂ. ಮತ್ತು ಕಲ್ಲಿದ್ದಲು ಸಚಿವಾಲಯ 34 ಕೋಟಿ ರೂ. ಗಳಿಸಿದೆ. ಈ ವರ್ಷ ಮುಕ್ತಗೊಳಿಸಲಾದ ಒಟ್ಟು 164 ಲಕ್ಷ ಚದರ ಅಡಿ ಜಾಗದಲ್ಲಿ ಕಲ್ಲಿದ್ದಲು ಸಚಿವಾಲಯದಲ್ಲಿ ಗರಿಷ್ಠ ಜಾಗವನ್ನು 66 ಲಕ್ಷ ಚದರ ಅಡಿ ಮುಕ್ತಗೊಳಿಸಲಾಗಿದೆ. 21 ಲಕ್ಷ ಚದರ ಅಡಿಗಳಲ್ಲಿ ಭಾರೀ ಕೈಗಾರಿಕೆ ಸಚಿವಾಲಯ, ನಂತರ ರಕ್ಷಣಾ ಸಚಿವಾಲಯ 19 ಲಕ್ಷ ಚದರ ಅಡಿಯನ್ನು ಮುಕ್ತಗೊಳಿಸಲಾಗಿದೆ ಎಂದು ವರದಿ ಹೇಳಿದೆ.

ಈ ವರ್ಷ, ಸುಮಾರು 24 ಲಕ್ಷ ಕಡತಗಳನ್ನು ವಿಲೇವಾರಿ ಮಾಡಲಾಗಿದ್ದು ಗರಿಷ್ಠ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (3.9 ಲಕ್ಷ ಕಡತಗಳು) ನಂತರ ಸೇನಾ ವ್ಯವಹಾರಗಳ ಇಲಾಖೆ (3.15 ಲಕ್ಷ ಕಡತಗಳು) ವಿಲೇ ಮಾಡಲಾಗಿದೆ. ಸ್ವಚ್ಛತಾ ಅಭಿಯಾನದ ಪ್ರಭಾವದಿಂದಾಗಿ ಒಟ್ಟಾರೆ ಇ-ಫೈಲ್ ಅಳವಡಿಕೆಯು ಸುಮಾರು 96% ಕ್ಕೆ ಏರಿದೆ. ಈ ವರ್ಷ ಸುಮಾರು 2.58 ಲಕ್ಷ ಕಛೇರಿ ಸೈಟ್‌ಗಳನ್ನು ಅಭಿಯಾನದಲ್ಲಿ ಒಳಪಡಿಸಲಾಗಿದೆ.