ನೀವು ರಾತ್ರಿ ಮೊಬೈಲ್ ನೋಡ್ತಾ ನೋಡ್ತಾ ಮಲಗುವವರಾ?ಹಾಗಿದ್ರೆ ಸ್ವಲ್ಪ ಕೇಳಿ!

ರಾತ್ರಿ ಇಡೀ ಮೊಬೈಲ್ ನೋಡ್ತಾ ನೋಡ್ತಾ ಮಲಗುವವರೇ ಜಾಸ್ತಿ. ಸ್ವಲ್ಪ ಸಮಯ ಸಿಕ್ಕಿದರೂ ನಾವು ಬೇರೇನೂ ಕೆಲಸ ಮಾಡುವುದಿಲ್ಲ ಆದರೆ ಮೊಬೈಲ್ ಹಿಡಿದು ಏನೇನೋ ನೋಡ್ತಾ ಇರುತ್ತೇವೆ. ಎಷ್ಟೆಂದರೆ ಮೊಬೈಲ್ ನೋಡ್ತಾ ನೋಡ್ತಾ ನಾವು ಹಿಂದೆಲ್ಲಾ ರಾತ್ರಿ ನೋಡುತ್ತಿರುವ ಆಕಾಶ, ನಕ್ಷತ್ರ ಇವುಗಳನ್ನೆಲ್ಲಾ ಈಗ ನೋಡುವುದನ್ನೇ ಮರೆತು ಬರೀ ಮೊಬೈಲ್ ನೋಡುವುದರಲ್ಲೇ ತಲ್ಲೀನರಾಗುತ್ತಿದ್ದೇವೆ.

ಆದರೆ ರಾತ್ರಿ ಮೊಬೈಲ್ ನೋಡ್ತಾ ನೋಡ್ತಾ ನಿದ್ದೆ ಜಾರುವುದು ಅಪಾಯಕಾರಿ. ನಿಮಗೂ ಮಲಗುವ  ಮುನ್ನ ಮೊಬೈಲ್ ನೋಡಿಕೊಂಡು ಮಲಗುವ ಕೆಟ್ಟ ಅಭ್ಯಾಸವಿದ್ದರೆ ಈ ಸುದ್ದಿಯನ್ನೊಮ್ಮೆ ಓದಿ.

ಏನೇನು ಸಮಸ್ಯೆ ಬರುತ್ತೆ ರಾತ್ರಿ ಮೊಬೈಲ್ ನೋಡ್ತಾ ನಿದ್ದೆ ಜಾರಿದರೆ?

ಏಕಾಗ್ರತೆಯ ಸಮಸ್ಯೆ :

ಏಕಾಗ್ರತೆಗೆ ಮೊಬೈಲ್ ಅಡ್ಡಿಯಾಗುತ್ತಿದೆ.ಮನಸ್ಸಿಗೆ ನೆಮ್ಮದಿ ಮತ್ತು ಅತೀ ಹೆಚ್ಚಿನ ಏಕಾಗ್ರತೆ ಸಿಗುವುದೇ ರಾತ್ರಿಯ ಹೊತ್ತು.ಆದರೆ ಅಂತಹ ಏಕಾಗ್ರತೆಯ ಹೊತ್ತನ್ನು ನಾವು ಬೇರೆ ಓದಿಗೆ ಬಳಸಿಕೊಳ್ಳದೇ ಮೊಬೈಲ್ ಅನ್ನೇ ಬಳಸುತ್ತೇವೆ.

ರಾತ್ರಿ ಮೊಬೈಲ್ ನೋಡ್ತಾ ನಿದ್ದೆ ಜಾರಿದರೆ ಏಕಾಗ್ರತೆಯ ಕೊರತೆ ಉಂಟಾಗುತ್ತದೆ. ಯಾವ ಕೆಲಸದಲ್ಲಿಯೂ ಸರಿಯಾಗಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಪರಿಣಾಮ ಕಾರ್ಯಕ್ಷಮತೆಯ ಮೇಲೆ ಆಗುತ್ತದೆ. ಇದರೊಂದಿಗೆ ವ್ಯಕ್ತಿಯ ಸ್ಮರಣೆಯೂ ಕಡಿಮೆಯಾಗುತ್ತದೆ.

ದೃಷ್ಟಿ ಸಮಸ್ಯೆ:

ಮೊಬೈಲ್‌ಗಳಿಂದ ಹೊರಹೊಮ್ಮುವ ನೀಲಿ ಕಿರಣಗಳು ನಮ್ಮ ಕಣ್ಣುಗಳಿಗೆ ಹಾನಿಯನ್ನುಂಟು ಮಾಡುತ್ತವೆ. ವಿಶೇಷವಾಗಿ ರಾತ್ರಿಯಲ್ಲಿ ಕತ್ತಲೆಯಲ್ಲಿ, ಮೊಬೈಲ್‌ಗಳನ್ನು ನೋಡುವುದರಿಂದ, ಈ ನೀಲಿ ಕಿರಣಗಳು ನಮ್ಮ ಕಣ್ಣಿಗೆ ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಇದು ನಮ್ಮ ಕಣ್ಣಿನ ರೆಟಿನಾಗೆ ಸಮಸ್ಯೆ ತರುತ್ತದೆ.

ನಿದ್ರೆಯ ಸಮಸ್ಯೆ:
ರಾತ್ರಿ ಮಲಗುವ ಮುನ್ನ ಮೊಬೈಲ್ ಬಳಸುವ ಜನರು ಸಾಮಾನ್ಯಕ್ಕಿಂತ ಕಡಿಮೆ ನಿದ್ದೆ ಮಾಡುತ್ತಾರೆ. ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿ ರಾತ್ರಿ ಮಲಗುವ ಮೊದಲು ಮೊಬೈಲ್ ನೋಡುತ್ತಿದ್ದರೆ, ಆತ ಸಾಮಾನ್ಯಕ್ಕಿಂತ ಕಡಿಮೆ ನಿದ್ದೆ ಮಾಡುತ್ತಾನೆ. ಅದೇ ಒಬ್ಬ ಮಲಗುವ ಮುನ್ನ ಪುಸ್ತಕ (Book) ಓದಿಕೊಂಡು ನಿದ್ರೆಗೆ ಜಾರಿದರೆ ಹೆಚ್ಚು ನಿದ್ದೆ  ಮಾಡುತ್ತಾನೆ ಎನ್ನುವುದು ಅಧ್ಯಯನದಲ್ಲಿ ಸಾಬೀತಾಗಿದೆ.ನೋಡಿ ಇನ್ನಾದರೂ ರಾತ್ರಿ ಹೊತ್ತಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಿ. ಅದೇ ಹೊತ್ತನ್ನು ಸುಂದರ ಓದಿಗೋ,ಇತರ ಹವ್ಯಾಸಗಳಿಗೋ ಮೀಸಲಿಡಿ, ಒಳ್ಳೆಯ ನಿದ್ದೆಯೂ ಮಾಡ್ತೀರಿ, ನೆಮ್ಮದಿಯಾಗಿಯೂ ಇರ್ತೀರಿ