ನವದೆಹಲಿ: ದುಬಾರಿ ಮೊಬೈಲ್ ರೀಚಾರ್ಜ್ನಿಂದ ಬಳಕೆದಾರರಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಟೆಲಿಕಾಂ ಕ್ಷೇತ್ರದ ಮೇಲಿನ ಶುಲ್ಕ ಮತ್ತು ನಿಯಂತ್ರಣ ವ್ಯವಸ್ಥೆ ಕುರಿತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂಬ ಮಾಹಿತಿ ದೊರಕಿದೆ. ಜಿಯೋ, ಏರ್ಟೆಲ್ ಹಾಗೂ ವೊಡಾಫೋನ್-ಐಡಿಯಾ ರೀಚಾರ್ಜ್ ದರಗಳು ಶೇ.10ರಿಂದ 15ರಷ್ಟು ಕಡಿಮೆಯಾಗಲಿದೆ ಎನ್ನುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಪ್ರಸ್ತುತ ದೂರಸಂಪರ್ಕ ಇಲಾಖೆಯ ಮಾಹಿತಿಯಂತೆ, ಟೆಲಿಕಾಂ ಸೇವೆಗಳಿಗೆ ವಾರ್ಷಿಕ ಆಥರೈಸೇಶನ್ ಶುಲ್ಕವು Adjusted Gross Revenue (AGR)ನ ಶೇ.8ರಷ್ಟಿದೆ. ಇದರಲ್ಲಿ ಡಿಜಿಟಲ್ ಭಾರತ್ ನಿಧಿಗೆ ಸಂಬಂಧಿಸಿದ ಕೊಡುಗೆಯೂ ಒಳಗೊಂಡಿದೆ. ಸ್ಪೆಕ್ಟ್ರಂಗೆ ಸಂಬಂಧಿಸಿದ ಶುಲ್ಕಗಳು ಪ್ರತ್ಯೇಕವಾಗಿ ಅನ್ವಯಿಸುತ್ತವೆ.
ಇಂಟರ್ನೆಟ್ ಬಳಸದ ಗ್ರಾಹಕರಿಗಾಗಿ ವಾಯ್ಸ್ ಮತ್ತು SMS ಮಾತ್ರ ಒಳಗೊಂಡ ಪ್ರೀಪೇಯ್ಡ್ ಪ್ಲಾನ್ಗಳು ಈಗಾಗಲೇ ಲಭ್ಯವಿವೆ. ಇಂತಹ ಪ್ಲಾನ್ಗಳು ಡೇಟಾ ಅಗತ್ಯವಿಲ್ಲದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದು TRAI ತಿಳಿಸಿದೆ. ಈ ಪ್ಲಾನ್ಗಳಿಗೆ 365 ದಿನಗಳವರೆಗಿನ ಮಾನ್ಯತೆಯೂ ಇರಬಹುದು.
ಇದೇ ವೇಳೆ, ಪ್ರತಿಯೊಂದು ಟೆಲಿಕಾಂ ಸೇವಾ ಪೂರೈಕೆದಾರರೂ ಕನಿಷ್ಠ ಒಂದು 30 ದಿನಗಳ ಪ್ಲಾನ್ ಹಾಗೂ ಪ್ರತಿ ತಿಂಗಳು ಅದೇ ದಿನ ನವೀಕರಿಸಬಹುದಾದ ಪ್ಲಾನ್ ಒದಗಿಸಬೇಕು ಎಂದು TRAI ನಿಯಮಗಳಲ್ಲಿ ತಿಳಿಸಿದೆ.
ರೀಚಾರ್ಜ್ ದರ ಕಡಿಮೆಯಾಗುತ್ತದೆಯೇ?
ಟೆಲಿಕಾಂ ಕಂಪನಿಗಳ ಮೇಲಿನ ಶುಲ್ಕ ಕಡಿಮೆಯಾದರೆ, ಕಂಪನಿಗಳ ವೆಚ್ಚದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಆದರೆ ಆ ಲಾಭವನ್ನು ಗ್ರಾಹಕರಿಗೆ ಸಂಪೂರ್ಣವಾಗಿ ಅಥವಾ ಭಾಗಶಃ ವರ್ಗಾಯಿಸುವುದೇ ಎಂಬುದು ಕಂಪನಿಗಳ ವಾಣಿಜ್ಯ ನಿರ್ಧಾರವಾಗಿರುತ್ತದೆ.ಆದರೂ ಈ ಕುರಿತು ಚರ್ಚೆ ನಡೆಯುತ್ತಿರುವುದರಿಂದ ರೀಚಾರ್ಜ್ ಬೆಲೆ ಶೀಘ್ರವೇ ಕಡಿಮೆಯಾದರೆ ಮೊಬೈಲ್ ಗ್ರಾಹಕರು ನಿಟ್ಟಿಸುರು ಬಿಡುವಂತಾಗಲಿದೆ.















