ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಎಗ್ಗಿಲ್ಲದೆ ಮೊಬೈಲ್ ಬಳಸುತ್ತಿರುವ ಘಟನೆಯನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ರೌಡಿ ಮಿಲ್ಟ್ರಿ ಸತೀಶ್ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿ ಅಲ್ಫೋನ್ಸಾ ಅಲಿಯಾಸ್ ಮಚ್ಚಾ ಎಂಬ ಕೈದಿ ಜೈಲಿನಲ್ಲಿದ್ದುಕೊಂಡೇ ಸಹಕೈದಿಗಳಿಗೆ 45,000 ರೂ. ಸ್ಮಾರ್ಟ್‌ಫೋನ್ ಮಾರಾಟ ಮಾಡ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಜೈಲಿನ ಶೌಚಾಲಯದಲ್ಲಿ ಪತ್ತೆಯಾಗಿದ್ದ ಫೋನ್‌ಗಳ ಸುಳಿವು ಬೆನ್ನತ್ತಿದ ಸಿಸಿಬಿ, ಆರೋಪಿಯನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ತನಿಖೆ ನಡೆಸಿದ್ದು, ಈ ವೇಳೆ ಸತ್ಯ ಹೊರಬಂದಿದೆ. ಆದರೆ, ಜೈಲಿನೊಳಗೆ ಈತನ ಕೈಗೆ ಮೊಬೈಲ್ ಸಿಕ್ತಿದಿದ್ದು ಹೇಗೆ ಎಂಬ ಪ್ರಶ್ನೆ ಶುರುವಾಗಿದ್ದು ಅಧಿಕಾರಿಗಳು ಇದರ ತನಿಖೆಗೆ ಮುಂದಾಗಿದ್ದಾರೆ.
- ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪಿಯಿಂದ ಮೊಬೈಲ್ ಮಾರಾಟದ ದಂಧೆ
- ಜೈಲಲ್ಲಿ ಸಹ ಕೈದಿಗಳಿಗೆ ₹45 ಸಾವಿರಕ್ಕೆ ಮೊಬೈಲ್ ಮಾರುತ್ತಿದ್ದ ಮಿಲ್ಟ್ರಿ ಸತೀಶ್‌ನ ಕೊಲೆ ಆರೋಪಿಯಾಗಿದ್ದ ವಿಚಾರಣಾಧೀನ ಕೈದಿ ಅಲ್ಫೋನ್ಸಾ ರಾಜ ಅಲಿಯಾಸ್ ಮಚ್ಚಾ ಕೈವಾಡ
- ಬಾಡಿ ವಾರಂಟ್ ಮೇರೆಗೆ ಆರೋಪಿಯನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು
ಬೆಂಗಳೂರು: ಅತ್ಯಾಚಾರ ಅಪರಾಧಿ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಸಿರುವುದು ಬಯಲಾಗಿರುವ ಬೆನ್ನಲ್ಲೇ, ವಿಚಾರಣಾಧೀನ ಕೈದಿಯೊಬ್ಬ 45 ಸಾವಿರ ರೂ.ಗಳಿಗೆ ಮೊಬೈಲ್ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
2024ರಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪತ್ತೆಯಾಗಿದ್ದ ಪ್ರಕರಣದ ತನಿಖೆಯನ್ನು ಸಿಸಿಬಿಯು ಈಗ ಚುರುಕುಗೊಳಿಸಿದ್ದು, ಅಲ್ಫೋನ್ಸಾ ರಾಜ ಅಲಿಯಾಸ್ ಮಚ್ಚಾ (27) ಎಂಬುವವನನ್ನು ಇತ್ತೀಚೆಗೆ ಬಂಧಿಸಿ ವಿಚಾರಣೆ ನಡೆಸಿದೆ.
”ವಿವೋ ಮೊಬೈಲ್‌ವೊಂದನ್ನು 45 ಸಾವಿರ ರೂ.ಗಳಿಗೆ ಕೊಲೆ ಪ್ರಕರಣದ ಆರೋಪಿಗಳಿಗೆ ಮಾರಾಟ ಮಾಡಿದ್ದೆ. ಹಣವನ್ನು ತನ್ನ ಸಹಚರನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದೆ” ಎಂದು ವಿಚಾರಣೆ ವೇಳೆ ಅಲ್ಫೋನ್ಸಾ ಹೇಳಿದ್ದಾನೆ. ಈ ವಿಚಾರವು ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಲವು ವರ್ಷಗಳಿಂದ ಕೈದಿಗಳ ಮೊಬೈಲ್ ಮಾರಾಟ ಎಗ್ಗಿಲ್ಲದೆ ಸಾಗಿ ಬಂದಿದೆ ಎಂಬುದಕ್ಕೆ ಮತ್ತಷ್ಟು ಸಾಕ್ಷ್ಯ ಒದಗಿಸಿದೆ ಎಂದು ಮೂಲಗಳು ತಿಳಿಸಿವೆ.
ಶೌಚಾಲಯ ಕೊಠಡಿಯಲ್ಲಿ ಮೊಬೈಲ್
ಕಾರಾಗೃಹದ ಎಂಟನೇ ಬ್ಯಾರಕ್‌ನ 7ನೇ ಕೊಠಡಿಯಲ್ಲಿ ಜೈಲು ಅಧಿಕಾರಿಗಳು 2024ರ ಸೆಪ್ಟೆಂಬರ್ 9ರಂದು ಅನಿರೀಕ್ಷಿತವಾಗಿ ತಪಾಸಣೆ ನಡೆಸಿದಾಗ ಶೌಚಾಲಯದ ಕೊಠಡಿಯಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿಟ್ಟಿದ್ದ ಒಂದು ವಿವೋ ಕಂಪೆನಿಯ ಆ್ಯಂಡ್ರಾಯ್ಡ್ ಹಾಗೂ ಒಂದು ಕೀ ಪ್ಯಾಡ್ ಮೊಬೈಲ್‌ಗಳು ಪತ್ತೆಯಾಗಿದ್ದವು. ಹೀಗಾಗಿ, ಜೈಲು ಅಧಿಕಾರಿಗಳು, ಜೈಲು ನಿಯಮ ಉಲ್ಲಂಘಿಸಿ ಮೊಬೈಲ್ ಬಳಕೆ ಮಾಡಿದ್ದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯು ಸಿಸಿಬಿಗೆ ವರ್ಗಾವಣೆಗೊಂಡಿದ್ದು, ಮೊಬೈಲ್ ಬಳಕೆ ಮಾಡಿದ್ದ ಆನೇಕಲ್‌ನ ಕೊಲೆ ಪ್ರಕರಣವೊಂದರ ಆರೋಪಿಗಳಾದ ಮಧುಸೂದನ್ ಹಾಗೂ ಶಶಿಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮೊಬೈಲ್ ಮಾರಿದ್ದ ಅಲ್ಫೋನ್ಸಾ ಕಡೆಗೆ ಬೆಟ್ಟು ಮಾಡಿದ್ದರು.
ಈ ನಿಟ್ಟಿನಲ್ಲಿ ಇತ್ತೀಚೆಗೆ ಬಾಡಿ ವಾರಂಟ್ ಮೇರೆಗೆ ಅಲ್ಫೋನ್ಸಾ ನನ್ನು ಬಂಧಿಸಿ ವಶಕ್ಕೆ ಪಡೆಯಲಾಗಿತ್ತು. ಆರೋಪಿಯು ವಿಚಾರಣೆ ವೇಳೆ ತಾನು 45 ಸಾವಿರ ರೂ.ಗಳಿಗೆ ಮಧುಸೂದನ್ ಹಾಗೂ ಶಶಿಕುಮಾರ್‌ಗೆ ಮಾರಾಟ ಮಾಡಿದ್ದು, ಹಣವನ್ನು ತನ್ನ ಸಹ ಕೈದಿ ದೇವೇಂದ್ರ ನಾಯಕ್ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆರೋಪಿ ಅಲ್ಫೋನ್ಸಾ ನನ್ನು ಪುನಃ ಜೈಲಿಗೆ ಕಳಿಸಿದ್ದು, ತಲೆಮರೆಸಿಕೊಂಡಿರುವ ದೇವೇಂದ್ರನ ಬಂಧನಕ್ಕೆ ಕ್ರಮ ವಹಿಸಿರುವುದಾಗಿ ಮೂಲಗಳು ಹೇಳಿವೆ.















