ಉಡುಪಿ: ಮಣಿಪಾಲ ನಗರದ ಹೃದಯ ಭಾಗವಾದ ಟೈಗರ್ ಸರ್ಕಲ್ ಬಳಿ ನಿತ್ಯ ಸಂಚಾರ ದಟ್ಟಣೆ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಗುರುವಾರ ನಗರಸಭೆ ಅಧಿಕಾರಿಗಳು, ಪೊಲೀಸ್ ಉಪನಿರೀಕ್ಷಕ ಹಾಗೂ ಸ್ಥಳೀಯ ನಗರ ಸಭಾ ಸದಸ್ಯರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಖ್ಯ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್, ಅವೈಜ್ಞಾನಿಕ ರೀತಿಯಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್, ಅಸಮರ್ಪಕ ಪ್ರಯಾಣಿಕರ ತಂಗುದಾಣ, ಫುಟ್ ಪಾತ್ ನಲ್ಲಿ ಬೀದಿ ಬದಿ ವ್ಯಾಪಾರದಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳೆಯುತ್ತಿರುವ ಮಣಿಪಾಲ ನಗರದ ಸುಗಮ ಸಂಚಾರ, ಸ್ವಚ್ಚತೆ ಹಾಗೂ ಸಮಗ್ರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ಬಸ್ ನಿಲ್ದಾಣ, ಫುಟ್ ಪಾತ್, ಬೀದಿ ದೀಪ ವ್ಯವಸ್ಥೆ ಹಾಗೂ ಅಪರಾಧ ಚಟುವಟಿಕೆಗಳ ನಿಯಂತ್ರಣದ ಬಗ್ಗೆ ನಿಗಾವಹಿಸುವ ಪೊಲೀಸ್ ಇಲಾಖೆ ಹಾಗೂ ನಗರಸಭೆಯ ಮೂಲಕ ಸ್ಥಳೀಯ ರಿಕ್ಷಾ, ಟ್ಯಾಕ್ಸಿ, ಬಸ್ ಸಂಘಗಳು ಮತ್ತು ವ್ಯಾಪಾರಸ್ಥರ ಸಲಹೆ ಸೂಚನೆಗಳನ್ನು ಪಡೆದು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರಮೇಶ್ ನಾಯ್ಕ್, ಎಇಇ ಯಶವಂತ ಪ್ರಭು, ಮಣಿಪಾಲ ಪೊಲೀಸ್ ಉಪನಿರೀಕ್ಷಕ ಖಾದರ್, ನಗರಸಭಾ ಸದಸ್ಯರಾದ ಮಂಜುನಾಥ ಮಣಿಪಾಲ, ಕಲ್ಪನಾ ಸುಧಾಮ, ಪ್ರಮುಖರಾದ ಸುಬ್ಬಣ್ಣ ಪೈ, ಪ್ರಶಾಂತ್ ಭಟ್ ಪೆರಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.