ಶಾಸಕ ಸುರೇಶ್‌ ಕುಮಾರ್‌ 702 ಕಿಮೀ ಸೈಕಲ್‌ಯಾತ್ರೆ; ಪ್ರಧಾನಿ ಮೋದಿ ಮೆಚ್ಚುಗೆ!

ನವದೆಹಲಿ: ಬೆಂಗಳೂರಿನಿಂದ ಕನ್ಯಾಕುಮಾರಿ ವರೆಗೆ ಸೈಕಲ್‌ ಯಾನ ಮಾಡಿದ ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್‌ ಅವರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಸುರೇಶ್‌ ಕುಮಾರ್‌ ಅವರಿಗೆ ಕರೆ ಮಾಡಿ ಮೋದಿ ಅಭಿನಂದನೆ ತಿಳಿಸಿದ್ದಾರೆ. ಶಾಸಕರ ಸಾಧನೆಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮೋದಿ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಕೂಡ ಹಂಚಿಕೊಂಡಿದ್ದಾರೆ.

70 ವರ್ಷದ ರಾಜಾಜಿನಗರದ ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್ ಇತ್ತೀಚೆಗೆ ತಿಂಗಳುಗಟ್ಟಲೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಅಪರೂಪದ ನರವೈಜ್ಞಾನಿಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದ ಅವರು ವಿಶ್ರಾಂತಿಯಲ್ಲಿದ್ದರು. ಆದರೂ 5 ದಿನಗಳ ಕಾಲ ಈ ಸವಾಲಿನ 702 ಕಿ.ಮೀ ಪ್ರಯಾಣವನ್ನು ಸೈಕಲ್​ನಲ್ಲೇ ಪೂರ್ಣಗೊಳಿಸಿದ್ದಾರೆ. ಅವರು “ರಾಜಾಜಿನಗರ ಪೆಡಲ್ ಪವರ್’ ಬ್ಯಾನರ್ ಅಡಿಯಲ್ಲಿ ಯುವಕರೊಂದಿಗೆ ಬೆಂಗಳೂರಿನಿಂದ ಕನ್ಯಾಕುಮಾರಿ ವರೆಗೆ 5 ದಿನಗಳ, 702 ಕಿಮೀ ಸೈಕಲ್ ಸವಾರಿಯನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಸವಾರಿ ಕೈಗೊಂಡ ಎಸ್.ಸುರೇಶ್ ಕುಮಾರ್ ಅವರ ಸಾಧನೆ ಶ್ಲಾಘನೀಯ ಮತ್ತು ಸ್ಫೂರ್ತಿದಾಯಕವಾಗಿದೆ. ಆರೋಗ್ಯದ ಹಿನ್ನಡೆಗಳನ್ನು ಮೆಟ್ಟಿ ನಿಂತು ಅವರು ಈ ಸಾಧನೆ ಮಾಡಿರುವುದು ಅವರ ದೃಢ ನಿರ್ಧಾರ ಮತ್ತು ಅಚಲ ಮನೋಭಾವವನ್ನು ಎತ್ತಿ ತೋರಿಸುತ್ತದೆ. ಇದು ಫಿಟ್ನೆಸ್ ಕುರಿತು ಪ್ರಮುಖ ಸಂದೇಶವನ್ನೂ ನೀಡುತ್ತದೆ. ಅವರೊಂದಿಗೆ ಮಾತನಾಡಿ, ಅವರ ಈ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದೆ ಎಂದು ಮೋದಿ ತಿಳಿಸಿದ್ದಾರೆ.