ಉಡುಪಿ: ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಅವರೇ ಬೆಂಬಲಕ್ಕೆ ರಾಜ್ಯ ಸರ್ಕಾರ ನಿಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಉಡುಪಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿಹಚ್ಚಿದ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡವಿದೆ. ಸ್ವತಃ ಶಾಸಕರೇ ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ದೂರು ನೀಡಿದ್ದಾರೆ. ಆದರೆ ಈಗ ಸಂಪತ್ ರಾಜ್ ತನಿಖೆಯಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದಾರೆ. ಇನ್ನೊಂದೆಡೆ ಡಿ.ಕೆ. ಶಿವಕುಮಾರ್ ಅವರು ಸಂಪತ್ ರಾಜ್ ನಾಪತ್ತೆಯಾಗಿಲ್ಲ, ಮನೆಯಲ್ಲಿದ್ದಾರೆಂದು ಹೇಳುತ್ತಾರೆ. ಹಾಗಾದರೆ ಶಿವಕುಮಾರ್ ಅವರಿಗೆ ನೈತಿಕತೆ ಇದ್ದರೆ ಸಂಪತ್ ರಾಜ್ ಗೆ ಶರಣಾಗಲು ಹೇಳಲಿ ಎಂದು ಸವಾಲು ಹಾಕಿದರು.
ಶಿರಾ ಮತ್ತು ಆರ್.ಆರ್. ನಗರದಲ್ಲಿ ಬಿಜೆಪಿಯ ಸಂಘಟನಾ ಶಕ್ತಿಗೆ ಗೆಲುವು ಸಿಕ್ಕಿದೆ. ಕಾಂಗ್ರೆಸ್ ನಲ್ಲಿ ನಾಯಕನ ಸ್ಥಾನಕ್ಕೆ ಈಗಾಗಲೇ ಹಗ್ಗಾಜಗ್ಗಾಟ ನಡೆಯುತ್ತಿದೆ. ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಸೋಲುಬೇಕೆಂದು ಸಿದ್ದರಾಮಯ್ಯ, ಶಿರಾದಲ್ಲಿ ಸೋಲಬೇಕೆಂದು ಡಿಕೆ ಶಿವಕುಮಾರ್ ಬಯಸಿದ್ದರು. ಅದರಂತೆ ಅವರಿಬ್ಬರು ಸಾಧಿಸಿ ತೋರಿಸಿದ್ದಾರೆ ಎಂದು ಲೇವಡಿ ಮಾಡಿದರು.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ. ಯಾರಿಗೆ ಮಂತ್ರಿ ಸ್ಥಾನ ಕೊಡಬೇಕೆಂಬುವುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.