ಶೀರ್ಷಿಕೆ ಹೇಳುವಂತೆ ಇದೊಂದು ಸುಂದರ ಪ್ರೇಮಕಥೆಯ ಜೊತೆಗೆ ಫ್ಯಾಮಿಲಿ ಎಮೋಷನಲ್ ಡ್ರಾಮಾ. ಈ ಸಿನಿಮಾ ಮೂಲಕ ಗಡಿನಾಡ ಪ್ರತಿಭೆ ಅಂಜನ್ ರಾಮಚಂದ್ರ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಾಯಕಿಯಾಗಿ ಶ್ರಾವಣಿ ನಟಿಸಿದ್ದಾರೆ.
ಸ್ಯಾಂಡಲ್ವುಡ್ಗೆ ಟ್ಯಾಲೆಂಟ್ ಇರುವ ಪ್ರತಿಭೆಗಳೇ ಎಂಟ್ರಿಯಾಗುತ್ತಿದ್ದಾರೆ. ಇದೀಗ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ‘ಲವ್ ರೆಡ್ಡಿ’ ಎಂಬ ಸಿನಿಮಾ ಮಾಡಿದ್ದಾರೆ.ಹೊಸ ಪ್ರತಿಭೆಗಳ ‘ಲವ್ ರೆಡ್ಡಿ’ ಚಿತ್ರದ ಫಸ್ಟ್ ಝಲಕ್ ಅನ್ನು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಿಡುಗಡೆಗೊಳಿಸಿದ್ದಾರೆ.
ಈ ವೇಳೆ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, “ಅಂಜನ್ ರಾಮಚಂದ್ರ ನಮ್ಮ ಜಿಲ್ಲೆಯ ಹುಡುಗ. ಇನ್ಫೋಸಿಸ್ ನಾರಾಯಣ್ ಮೂರ್ತಿಯವರಿಗೆ ಜನ್ಮ ಕೊಟ್ಟ ಜಿಲ್ಲೆ ನಮ್ಮದು. ಎರಡು ಭಾರತ ರತ್ನ, ಎರಡು ಪದ್ಮಶ್ರೀ, ಒಂದು ಪದ್ಮಭೂಷಣ ಪಡೆದ ಜಿಲ್ಲೆ ನಮ್ಮದು. ಆರ್ಆರ್ಆರ್ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳಿಗೆ ಸಾಹಿತ್ಯ ಬರೆಯುವ ವರದರಾಜು ಚಿಕ್ಕಬಳ್ಳಾಪುರದವರೇ. ಇಂತಹ ಜಿಲ್ಲೆಯಿಂದ ಅಂಜನ್ ರಾಮಚಂದ್ರ ಹೀರೋ ಆಗಿ ಬರ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆ. ಕನ್ನಡಿಗರು ಈ ಚಿತ್ರವನ್ನು ಆರಾಧಿಸಬೇಕು” ಎಂದರು.ಈ ಹಿಂದೆ ‘ಲವ್ ರೆಡ್ಡಿ’ ಸಿನಿಮಾದ ಫಸ್ಟ್ ಲುಕ್ ಅನ್ನು ನಟಸಿಂಹ ಬಾಲಯ್ಯ ಬಿಡುಗಡೆ ಮಾಡಿದ್ದರು. ಇದೀಗ ಚಿತ್ರದ ಫಸ್ಟ್ ಝಲಕ್ ಅನ್ನು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅನಾವರಣ ಮಾಡಿ ತಮ್ಮೂರಿನ ಸಿನಿಮೋತ್ಸಾಹಿಗಳಿಗೆ ಸಾಥ್ ನೀಡಿದ್ದಾರೆ. ಇತ್ತೀಚೆಗೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಚಿತ್ರತಂಡ ಈ ಚಿತ್ರದ ಅನುಭವವನ್ನು ಹಂಚಿಕೊಂಡಿತ್ತು.
ಬಳಿಕ ನಾಯಕ ಅಂಜನ್ ಮಾತನಾಡಿ, “ಈ ಸಿನಿಮಾ ಶುರುವಾಗುವ ಮೊದಲು ನಾನು ನಮ್ಮ ಡೈರೆಕ್ಟರ್ ಸಾಕಷ್ಟು ಸ್ಟ್ರಗಲ್ ಮಾಡಿದ್ದೇವೆ. ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇವೆ. ಕಷ್ಟಪಟ್ಟು ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ತುಂಬಾ ಜನ ಈ ಚಿತ್ರಕ್ಕೆ ಬೆಂಬಲ ಕೊಟ್ಟಿದ್ದಾರೆ. ಈ ಸಿನಿಮಾ ಮೂಲಕ ತುಂಬಾ ಜನ ಇಂಡಸ್ಟ್ರಿಗೆ ಮೊದಲ ಹೆಜ್ಜೆ ಇಡುತ್ತಿದ್ದಾರೆ” ಎಂದು ಹೇಳಿದರು.
“ನಾನು ಮೂಲತಃ ಹೈದರಾಬಾದ್ನವ. ಲವ್ ರೆಡ್ಡಿ ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬರ್ತಿದೆ. ಈ ಚಿತ್ರದ ಮೂಲಕ ನನ್ನ ಕನಸು ನನಸಾಗಿದೆ. ಕಳೆದ ಏಳು ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ” ಎಂದ ನಿರ್ದೇಶಕ ಸ್ಮರಣ್ ರೆಡ್ಡಿ ಈ ಚಿತ್ರಕ್ಕೆ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಲವ್ ರೆಡ್ಡಿ ಸಿನಿಮಾ ಮೂಲಕ ಒಂದಷ್ಟು ಯುವ ಸಿನಿಮೋತ್ಸಾಹಿಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ಸುತ್ತಮುತ್ತ ಲವ್ ರೆಡ್ಡಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಸೆಹೇರಿ ಸ್ಟುಡಿಯೋ, ಎಂಜಿಆರ್ ಫಿಲಂಸ್, ಗೀತಾಂಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುನಂದಾ ಬಿ ರೆಡ್ಡಿ, ಮದನ್ ಗೋಪಾಲ್ ರೆಡ್ಡಿ, ಪ್ರಭಂಜನ್ ರೆಡ್ಡಿ, ಹೇಮಲತಾ ರೆಡ್ಡಿ, ನಾಗರಾಜ್ ಬೀರಪ್ಪ ನಿರ್ಮಾಣ ಮಾಡಿದ್ದಾರೆ. ಪ್ರಿನ್ಸ್ ಹೆನ್ರಿ ಸಂಗೀತ ಸಂಯೋಜನೆ, ಅಷ್ಕರ್ ಅಲಿ ಛಾಯಾಗ್ರಹಣ, ಬಾಹುಬಲಿಯ ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಚಿತ್ರಕ್ಕಿದೆ.
‘ಲವ್ ರೆಡ್ಡಿ’ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಇಂಪ್ರೆಸ್ ಆಗಿ ಮೂಡಿಬಂದಿದ್ದು, ಗಾಢವಾದ ಪ್ರೇಮಛಾಯೆ ಕಾಣ್ತಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಸ್ಮರಣ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ಚಿತ್ರ. ಅಂಜನ್ ರಾಮಚಂದ್ರ ಅವರಿಗೆ ಒಂದಷ್ಟು ಕಿರುಚಿತ್ರ ಹಾಗೂ ವೆಬ್ಸೀರಿಸ್ಗಳಲ್ಲಿ ನಟಿಸಿರುವ ಅನುಭವವಿದೆ. ನಿರ್ದೇಶಕ ಸ್ಮರಣ್ ಜೊತೆಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು, ಇದೀಗ ನಾಯಕನಾಗಿ ಚೊಚ್ಚಲ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಹೊಸ ಕನಸಿನೊಂದಿಗೆ ಅಂಜನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.