ನೀವು ಬುಕ್ ಮಾಡಿದ್ದ ಟ್ರೈನ್ ಮಿಸ್ ಆದ್ರೆ ಹೀಗೂ ಮಾಡ್ಬೋದು!

ಪ್ರಯಾಣದ ಗಡಿಬಿಡಿಯಲ್ಲಿ ಹಲವರು ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ಟ್ರೈನ್ ಮಿಸ್ ಆಗುವುದು. ಆದರೆ ಇಂತಹ ಸಂದರ್ಭದಲ್ಲಿ ಕೈಯಲ್ಲಿರುವ ಟಿಕೆಟ್‌ನೊಂದಿಗೆ ಮತ್ತೊಂದು ರೈಲಿನಲ್ಲಿ ಪ್ರಯಾಣಿಸಬಹುದೇ ಎಂಬ ಪ್ರಶ್ನೆ ಬಹುತೇಕ ಜನರಲ್ಲಿ ಮೂಡುತ್ತದೆ. ಈ ಬಗ್ಗೆ ಭಾರತೀಯ ರೈಲ್ವೆ ನಿಯಮಗಳು ಸ್ಪಷ್ಟ ಸೂಚನೆ ನೀಡಿವೆ.

ರಿಸರ್ವೇಷನ್ ಟಿಕೆಟ್ ಇದ್ದರೆ ಏನು?

ಕನ್ಫರ್ಮ್ ರಿಸರ್ವೇಷನ್ ಟಿಕೆಟ್ ಹೊಂದಿದ್ದರೆ, ನೀವು ಟ್ರೈನ್ ಮಿಸ್ ಮಾಡಿದ ಬಳಿಕ ಅದೇ ಟಿಕೆಟ್ ಮೂಲಕ ಬೇರೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಇರುವುದಿಲ್ಲ. ಹೀಗೆ ಪ್ರಯಾಣಿಸಿದರೆ ಟಿಟಿಇ ದಂಡ ವಿಧಿಸುವ ಸಾಧ್ಯತೆ ಇದೆ ಮತ್ತು ಕೆಲ ಸಂದರ್ಭಗಳಲ್ಲಿ ಕಾನೂನು ಕ್ರಮವೂ ಕೈಗೊಳ್ಳಬಹುದು.

ಹೊಸ ಟಿಕೆಟ್ ಕಡ್ಡಾಯ

ರಿಸರ್ವ್ಡ್ ಟಿಕೆಟ್ ಮಿಸ್ ಮಾಡಿದರೆ, ಮುಂದಿನ ಪ್ರಯಾಣಕ್ಕಾಗಿ ಹೊಸ ಟಿಕೆಟ್ ಖರೀದಿಸಬೇಕಾಗುತ್ತದೆ. ಜೊತೆಗೆ, ಬಳಸದ ಟಿಕೆಟ್‌ಗೆ ಹಣ ಮರಳಿಸಿಕೊಳ್ಳಲು TDR (Ticket Deposit Receipt) ಸಲ್ಲಿಸುವ ಅವಕಾಶ ಇದೆ.

TDR ಮೂಲಕ ರಿಫಂಡ್ ಸಾಧ್ಯತೆ

TDR ಎನ್ನುವುದು ಬಳಸದೇ ಉಳಿದ ಟಿಕೆಟ್‌ಗೆ ರಿಫಂಡ್ ಪಡೆಯಲು ಬಳಸುವ ವಿಧಾನ. ಟ್ರೈನ್ ಮಿಸ್ ಆದ ಸಂದರ್ಭದಲ್ಲಿಯೂ ಕೆಲವು ನಿಯಮಗಳಡಿ ಹಣ ವಾಪಸ್ ಪಡೆಯಲು ಅವಕಾಶ ಇದೆ.

ಜನರಲ್ ಟಿಕೆಟ್ ಇದ್ದರೆ?

ಜನರಲ್ (Unreserved) ಟಿಕೆಟ್ ಹೊಂದಿದವರಿಗೆ ಸ್ವಲ್ಪ ಸಡಿಲಿಕೆ ಇರುತ್ತದೆ. ಟಿಕೆಟ್ ಮಾನ್ಯವಾಗಿರುವ ಅವಧಿಯಲ್ಲಿ ಅದೇ ವರ್ಗದ ಮುಂದಿನ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯ. ಆದರೆ ವರ್ಗ ಅಥವಾ ಮಾರ್ಗ ಬದಲಿಸಿದರೆ ದಂಡ ವಿಧಿಸಲಾಗುತ್ತದೆ.

ತಪ್ಪು ಮಾಡಿದರೆ ದಂಡ

ರಾಜಧಾನಿ, ಶತಾಬ್ದಿ, ವಂದೇ ಭಾರತ್ ಮುಂತಾದ ಪ್ರೀಮಿಯಂ ರೈಲುಗಳು ಮಿಸ್ ಆದ್ರೆ ಅದೇ ಜನರಲ್ ಟಿಕೆಟ್ ಹಿಡಿದು ಎಕ್ಸ್‌ಪ್ರೆಸ್ ರೈಲು ಹತ್ತುವುದು ನಿಯಮ ಉಲ್ಲಂಘನೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರನ್ನು “ಟಿಕೆಟ್ ಇಲ್ಲದವರು” ಎಂದು ಪರಿಗಣಿಸಿ ಭಾರೀ ದಂಡ ವಿಧಿಸಬಹುದು.