ಸಚಿವ ಸಿಂಧಿಯಾ ಹೇಳಿಕೆ : 2030ಕ್ಕೆ 42 ಕೋಟಿಗೆ ಏರಲಿದೆ ವಿಮಾನ ಪ್ರಯಾಣಿಕರ ಸಂಖ್ಯೆ

ರಾಜಮಂಡ್ರಿ : ರಾಜಮಂಡ್ರಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಅವರು, “ಇಂದು 14.5 ಕೋಟಿ ಇರುವ ವಿಮಾನ ಪ್ರಯಾಣಿಕರ ದಟ್ಟಣೆ 2030ರ ವೇಳೆಗೆ 42 ಕೋಟಿಗೆ ಬೆಳೆಯಲಿದೆ ಮತ್ತು ನಾಗರಿಕ ವಿಮಾನಯಾನವು ದೇಶದಲ್ಲಿ ಸಾರಿಗೆಗೆ ಅಡಿಪಾಯವಾಗಲಿದೆ” ಎಂದರು.

2030ರ ವೇಳೆಗೆ ಭಾರತದ ವಿಮಾನ ಪ್ರಯಾಣಿಕರ ಸಂಖ್ಯೆ 42 ಕೋಟಿಗೆ ಏರಿಕೆಯಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.ಭಾರತದ ವಿಮಾನ ಪ್ರಯಾಣಿಕರ ಸಂಖ್ಯೆ 2030ರ ವೇಳೆಗೆ 42 ಕೋಟಿಗೆ ಹೆಚ್ಚಾಗಲಿದೆ ಎಂದು ಕೇಂದ್ರ ವಿಮಾನಯಾನ ಸಚಿವರು ಹೇಳಿದ್ದಾರೆ.

ಹೆಲಿಪೋರ್ಟ್​​ಗಳ ಸಂಖ್ಯೆ 149ರಿಂದ 220ಕ್ಕೆ ಏರಿಕೆ: 2030 ರ ವೇಳೆಗೆ ಒಟ್ಟು ವಿಮಾನ ನಿಲ್ದಾಣಗಳು, ವಾಟರ್ ಡ್ರೋಮ್​ಗಳು ಮತ್ತು ಹೆಲಿಪೋರ್ಟ್​ಗಳ ಸಂಖ್ಯೆ 149 ರಿಂದ 220 ಕ್ಕೆ ಏರಲಿದೆ. ಸ್ವಾತಂತ್ರ್ಯದ ನಂತರ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳನ್ನು ಆರಂಭಿಸಲಾಗಿತ್ತು. ಆದರೆ ಕಳೆದ ಒಂಬತ್ತು ವರ್ಷಗಳಲ್ಲಿಯೇ ಹೊಸ 75 ವಿಮಾನ ನಿಲ್ದಾಣಗಳು, ವಾಟರ್ ಡ್ರೋಮ್​ಗಳು ಮತ್ತು ಹೆಲಿಪೋರ್ಟ್​ಗಳನ್ನು ದೇಶದಲ್ಲಿ ಆರಂಭಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.

ವಾಯು ಸಂಚಾರದಲ್ಲಿ ಗಣನೀಯ ಏರಿಕೆ: ಎಲ್ಲಾ ವಿಮಾನ ನಿಲ್ದಾಣಗಳಿಂದ ಸಂಪರ್ಕ ಸುಧಾರಿಸಿದೆ. 2014 ರಲ್ಲಿ ಆಂಧ್ರಪ್ರದೇಶದಲ್ಲಿ ಕೇವಲ 388 ರಷ್ಟಿದ್ದ ವಾಯು ಸಂಚಾರವು 1,164 ಕ್ಕೆ ಏರಿದೆ. ಇದು ಶೇಕಡಾ 200 ರಷ್ಟು ಹೆಚ್ಚಳವಾಗಿದೆ. ಆಂಧ್ರಪ್ರದೇಶದಲ್ಲಿ ಉಡಾನ್ ಯೋಜನೆಯಡಿ ಒಟ್ಟು 32 ಮಾರ್ಗಗಳನ್ನು ಕಾರ್ಯಗತಗೊಳಿಸಲಾಗಿದೆ. 2014 ರಲ್ಲಿ ಕೇವಲ ಒಂದು ಸಂಪರ್ಕವನ್ನು ಹೊಂದಿದ್ದ ರಾಜಮಂಡ್ರಿ ಇಂದು ಮೂರು ನಗರಗಳಿಗೆ ಸಂಪರ್ಕ ಹೊಂದಿದೆ. ತಿರುಪತಿ ಇಂದು ದೇಶದ 10 ನಗರಗಳಿಗೆ ಸಂಪರ್ಕ ಹೊಂದಿದೆ. ಹೈದರಾಬಾದ್ ಮತ್ತು ಬೆಂಗಳೂರಿಗೆ ಮಾತ್ರ ಸಂಪರ್ಕ ಹೊಂದಿದ್ದ ವಿಜಯವಾಡವು ಈಗ ಭಾರತದ ಎಂಟು ನಗರಗಳಿಗೆ ಮತ್ತು ಶಾರ್ಜಾಗೆ ಸಂಪರ್ಕ ಹೊಂದಿದೆ ಎಂದು ಸಚಿವ ಸಿಂಧಿಯಾ ಮಾಹಿತಿ ನೀಡಿದರು.

ಆಂಧ್ರಪ್ರದೇಶದ ಭೋಗಪುರಂ ಮತ್ತು ನೆಲ್ಲೂರಿನಲ್ಲಿ ಎರಡು ಹೊಸ ಗ್ರೀನ್ ಫೀಲ್ಡ್ ಯೋಜನೆಗಳು ಮತ್ತು ಪ್ರಕಾಶಂ ಬ್ಯಾರೇಜ್ ನಲ್ಲಿ ವಾಟರ್ ಡ್ರೋಮ್ ನಿರ್ಮಾಣವಾಗಲಿವೆ. 2014 ಕ್ಕಿಂತ ಮೊದಲು ಆಂಧ್ರಪ್ರದೇಶದಲ್ಲಿ ನಾಲ್ಕು ವಿಮಾನ ನಿಲ್ದಾಣಗಳಿದ್ದವು. ಆದರೆ, ಈಗ ಕರ್ನೂಲ್ ಮತ್ತು ಕಡಪ ಈ ಎರಡು ಹೆಚ್ಚುವರಿ ವಿಮಾನ ನಿಲ್ದಾಣಗಳು ರಾಜ್ಯದಲ್ಲಿ ಆರಂಭವಾಗಿವೆ ಎಂದು ಸಿಂಧಿಯಾ ಹೇಳಿದರು.
ದೇಶದ ಆರು ಮೆಟ್ರೋ ವಿಮಾನ ನಿಲ್ದಾಣಗಳಾದ ಬೆಂಗಳೂರು, ದೆಹಲಿ, ಚೆನ್ನೈ, ಕೋಲ್ಕತಾ, ಮುಂಬೈ ಮತ್ತು ಹೈದರಾಬಾದ್ ಗಳ ಈಗಿರುವ 22 ಕೋಟಿ ಪ್ರಯಾಣಿಕ ಸಾಮರ್ಥ್ಯವು ಮುಂದಿನ ಐದು ವರ್ಷಗಳಲ್ಲಿ 42 ಕೋಟಿಗೆ ಏರಲಿದೆ. ಕಳೆದ ಒಂಬತ್ತು ವರ್ಷಗಳಲ್ಲಿ 12 ಹೊಸ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳನ್ನು ಆರಂಭಿಸಲಾಗಿದ್ದು, ಇವುಗಳ ಒಟ್ಟು ಸಂಖ್ಯೆ 15 ಕ್ಕೆ ತಲುಪಿದೆ. ಮುಂದಿನ ವರ್ಷ ದೆಹಲಿ ಪಕ್ಕದ ಜೇವರ್ ನಲ್ಲಿ ಮತ್ತು ನವೀ ಮುಂಬೈನಲ್ಲಿ ಮತ್ತೆರಡು ಹೊಸ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳು ಸಿದ್ಧವಾಗಲಿವೆ ಎಂದು ಸಚಿವ ಸಿಂಧಿಯಾ ತಿಳಿಸಿದರು.