ಮಲ್ಪೆ ಬೀಚ್ ನಲ್ಲಿ ಅಕ್ಕ ಕೆಫೆ ಉದ್ಘಾಟಿಸಿದ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್

ಉಡುಪಿ: ಮಲ್ಪೆ ಬೀಚ್ನಲ್ಲಿ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆರಂಭಿಸಲಾದ ‘ಅಕ್ಕ ಕೆಫೆ’ಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಶನಿವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿ, ‘ಅಕ್ಕ ಕೆಫೆ’ ಕೇವಲ ಉಪಹಾರ ಮಂದಿರವಲ್ಲ, ಅದು ಮಹಿಳೆಯರ ಶ್ರಮ, ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿದೆ ಎಂದು ತಿಳಿಸಿದರು.

ಈ ಯೋಜನೆಯನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಂಜೀವಿನಿ ಯೋಜನೆಯಡಿ, ಉಡುಪಿ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಜಾರಿಗೆ ತರಲಾಗಿದೆ.

ವಿಶೇಷ ‘ಅಕ್ಕ ಕೆಫೆ’ಯನ್ನು ಕಲ್ಯಾಣಪುರದ ‘ನಿಧಿ ಸಂಜೀವಿನಿ ಸ್ವಸಹಾಯ ಸಂಘ’ ನಿರ್ವಹಿಸುತ್ತಿದ್ದು, ಮಹಿಳೆಯರೇ ಇದರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡು ಆರ್ಥಿಕ ಸ್ವಾವಲಂಬನೆಯತ್ತ ಹೆಜ್ಜೆಯಿಟ್ಟಿದ್ದಾರೆ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ಮಂಜುನಾಥ್ ಭಂಡಾರಿ, ಸ್ವರೂಪ ಟಿ.ಕೆ., ಪ್ರತೀಕ್ ಭಾಯಲ್, ಜೇಮ್ಸ್ ಡಿಸಿಲ್ವಾ ಸೇರಿದಂತೆ ವಿವಿಧ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.