ಐತಿಹಾಸಿಕ ಅತ್ತೂರು ಸಂತಲಾರೆನ್ಸ್ ಬಸಲಿಕಾ ಪುಣ್ಯಕ್ಷೇತ್ರಕ್ಕೆ ಸಚಿವೆ ಜಯಮಾಲ ಭೇಟಿ

ಕಾರ್ಕಳ: ಮಾನವ ಧರ್ಮವೇ ಶ್ರೇಷ್ಠವಾದುದು, ಉನ್ನತವಾದುದು, ಜಾತಿ, ಧರ್ಮಕ್ಕಿಂತ ನಂಬಿಕೆ ಮತ್ತು ಮಾನವ ಧರ್ಮಕ್ಕೆ ಹೆಚ್ಚಿನ ಬೆಲೆ ನೀಡಬೇಕು,  ಎಂದು ಕನ್ನಡ ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಹೇಳಿದರು.

ಐತಿಹಾಸಿಕ ಅತ್ತೂರು ಸಂತಲಾರೆನ್ಸ್ ಬಸಲಿಕಾ ಪುಣ್ಯಕ್ಷೇತ್ರಕ್ಕೆ ಗುರುವಾರದಂದು ಅವರು ಭೇಟಿ ನೀಡಿ, ಅತ್ತೂರು ಪುಣ್ಯಕ್ಷೇತ್ರದ ಕಾರಣೀಕದ ಕುರಿತು ಮಾತನಾಡಿದರು.

 ಸಂತ ಲಾರೆನ್ಸ್‌ರ ಆಶೀರ್ವಾದದೊಂದಿಗೆ ಮುಂದಿನ ವರ್ಷಾವಧಿಯಲ್ಲಿ ಸಚಿವೆಯಾಗಿಯೇ ಮುಂದುವರಿದು ಮುಂದಿನ ಅತ್ತೂರು ಜಾತ್ರೆಯಲ್ಲಿಯೂ ಪಾಲ್ಗೊಳ್ಳುವ ವಿಶ್ವಾಸ ನನಗಿದೆ ಎಂದರು.

ಬಸಿಲಿಕ ಪುಣ್ಯ ಕ್ಷೇತ್ರದ ನಿರ್ದೇಶಕ ಹಾಗೂ ಪ್ರಧಾನ ಧರ್ಮಗುರು ವಂದನೀಯ ಜಾರ್ಜ್ ಡಿಸೋಜಾ ಅವರ ಆಶೀರ್ವಾದ ಪಡೆದ ಸಚಿವೆ ಜಯಮಾಲ ಅವರು, ಸಂತಲಾರೆನ್ಸ್‌ರಿಗೆ ಆಳೆತ್ತರದ ಹೊಂಬತ್ತಿ  ಉರಿಸಿದರು.

ಧರ್ಮಕೇಂದ್ರದ ಸಹಾಯಕ ಧರ್ಮಗುರು ವಂದನೀಯ ಜೆನ್ಸಿಲ್ ಆಳ್ವ, ಪಾಲನಾ ಮಂಡಳಿಯ  ಜೋನ್ ಡಿಸಿಲ್ವ,ಸಂತೋಷ್ ಡಿಸಿಲ್ವ,  ತಹಶೀಲ್ದಾರ್ ಮಹಮ್ಮದ್ ಇಸಾಕ್, ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೈನ್, ತಾಲೂಕು ಪಂಚಾಯತ್ ಸದಸ್ಯ ಸುಧಾಕರ ಶೆಟ್ಟಿ, ಪುರಸಭಾ ಸದಸ್ಯ ಶುಭದರಾವ್, ರಹಮತ್ ಶೇಖ್ , ಪ್ರತಿಮಾ ರಾಣೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್,ಸುಭೀತ್ ಎನ್.ಆರ್., ಮಹಮ್ಮದ್ ಶರೀಫ್ ಮೊದಲಾದವರು ಉಪಸ್ಥಿತರಿದ್ದರು.