ಉಡುಪಿ: 1950 ಜನವರಿ 26 ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಸ್ವತಂತ್ರ ಭಾರತವು ತನ್ನ ಸಂವಿಧಾನವನ್ನು ಅನುಷ್ಠಾನಕ್ಕೆ ತಂದು ದೇಶದ ಆಡಳಿತಕ್ಕೆ ಕಾನೂನು ಚೌಕಟ್ಟನ್ನು ರೂಪಿಸಿದ ಈ ದಿನವು ನಮ್ಮೆಲ್ಲರಿಗೂ ಐತಿಹಾಸಿಕವಾಗಿದೆ. ವಿಶ್ವದ ವಿಶಾಲ ಹಾಗೂ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವವನ್ನು ಮುನ್ನೆಡಸಿಕೊಂಡು ಬಂದ ನಮ್ಮ ದೇಶದ ಎಲ್ಲಾ ಧೀಮಂತ ನಾಯಕರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.
ಅವರು ಗಣರಾಜ್ಯೋತ್ಸವದಂದು ನಗರದ ಅಜ್ಜರಕಾಡು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದರು.
ಡಾ|| ಬಿ.ಆರ್ ಅಂಬೇಡ್ಕರ್ರವರು ತಮ್ಮ ಅನುಭವ ಜ್ಞಾನ, ಅಧ್ಯಯನ, ದೂರದೃಷ್ಟಿಯ ಒಳನೋಟಗಳಿಂದ ಸಮಾಜದ ಎಲ್ಲಾ ಶೋಷಿತ ಜನ ಸಮುದಾಯದ ಏಳಿಗೆಗೆ, ಸಹಬಾಳ್ವೆಗೆ, ಮುಖ್ಯ ವಾಹಿನಿಗೆ ಬಂದು ಎಲ್ಲರಂತೆ ಬದುಕುವ ಅವಕಾಶಗಳನ್ನು ಕಲ್ಪಿಸುವ ಶ್ರೇಷ್ಠ ಸಂವಿಧಾನವನ್ನು ರಚಿಸಿದ್ದಾರೆ. ಆ ಮೂಲಕ ಮಾನವತೆಯ ಉಳಿವು, ಏಳಿಗೆ ಹಾಗೂ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಗಳೇ ಕಳೆದು ಹೋಗಿವೆ. 141 ಕೋಟಿಗೂ ಮೀರಿದ ಜನಸಂಖ್ಯೆಯ 29 ರಾಜ್ಯಗಳು, ಏಳು ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಭಾಷೆ, ಸಂಸ್ಕೃತಿ ಮತ್ತು ಜೀವನ ವಿಧಾನ ಹೊಂದಿದೆ. ಆದರೂ ಎಲ್ಲಾ ಭಾಷೆ ಮತ್ತು ಸಂಸ್ಕೃತಿಯನ್ನು ಭಾರತೀಯತೆ ಎನ್ನುವ ಒಂದು
ಬಂಧ ಹಿಡಿದಿಟ್ಟಿದೆ. ಭಾರತೀಯರೆಲ್ಲರಿಗೂ ಈ ಒಕ್ಕೂಟ ವ್ಯವಸ್ಥೆಯನ್ನು ಯಶಸ್ವಿಯಾಗಿ ಉಳಿಸಿಕೊಂಡಿರುವುದಕ್ಕಾಗಿ ಅಭಿನಂದಿಸುತ್ತೇನೆ ಎಂದರು.
ನಾವು ನಮ್ಮ ಸಂವಿಧಾನವನ್ನು ಒಮ್ಮತದಿಂದ ಅಂಗೀಕರಿಸಿ ಗಣರಾಜ್ಯವಾಗಿ ಇಂದಿಗೆ 74 ವರ್ಷವಾಯಿತು. ಈ ಸಂದರ್ಭದಲ್ಲಿ ಗಣರಾಜ್ಯೋತ್ಸವದ ನಮ್ಮ ಆಶಯಗಳು ಫಲ ನೀಡಿವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯ ಕಂಡು ಬಂದಿದೆ. ನಾವು ನಮ್ಮ ಭಾವೈಕ್ಯತೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರೂ ಇಂದಿಗೂ ಸಹ ನಮ್ಮ ದೇಶದ ರಾಜ್ಯಗಳ ನಡುವೆ ಅನೇಕ ವ್ಯಾಜ್ಯಗಳು ಹಾಗೇ ಉಳಿದಿವೆ ಎಂದು ಖೇದದಿಂದಲೇ ಹೇಳಬೇಕಾಗಿದೆ. ಅದು ಗಡಿ ವಿವಾದವಿರಬಹುದು, ಅಂತಾರಾಜ್ಯ ಜಲವಿವಾದ ಇರಬಹುದು ಅಥವಾ ಅಭಿವೃದ್ಧಿಯ ಅಸಮತೋಲನದ ಅಸಮಧಾನವಿರಬಹುದು. ಇವೆಲ್ಲವೂ
ನಮ್ಮ ರಾಜ್ಯಗಳ ನಡುವಿನ ವೈಮನಸ್ಸಿಗೆ ಕಾರಣವಾಗಿದೆ. ಈ ಎಲ್ಲದರ ಮಧ್ಯೆ ಭಾರತ ಶತ್ರು ರಾಷ್ಟ್ರಗಳ ನಿರಂತರ ಕುತಂತ್ರ ಭಯೋತ್ಪಾದನೆ ದಾಳಿಗೆ ಒಳಗಾಗುತ್ತಲೇ ಇದೆ. ಆದರೂ ಈ ಎಲ್ಲವನ್ನು ಮೆಟ್ಟಿ ನಿಲ್ಲುವ ಶಕ್ತಿ ಭಾರತಕ್ಕಿದೆ. ನಾವು ಭಾರತೀಯರು ಎನ್ನುವ ಬಗ್ಗೆ ಹೆಮ್ಮೆ ಇದೆ ಎಂದರು.
ದೇಶದಲ್ಲಿ ಯಾವುದೇ ದುಷ್ಟ ಶಕ್ತಿಗಳು ತಲೆ ಎತ್ತದಂತೆ ಮಾಡುವುದರ ಜೊತೆಗೆ ಸರ್ವ ಧರ್ಮಗಳನ್ನು ಗೌರವಿಸಿ ಯಾವುದೇ ಕೋಮು ಗಲಭೆಗಳಿಗೆ ಅವಕಾಶಕೊಡದೇ ಸರ್ವ ಧರ್ಮ ಸಮನ್ವಯ ಭಾವ ಬೆಳೆಸಿಕೊಂಡು ಹೋಗಲು ನಾವುಗಳೆಲ್ಲರೂ ಇಂದು ಪ್ರತಿಜ್ಞೆ ಮಾಡಬೇಕಾಗಿದೆ. ದೇಶದ ನಾಗರೀಕರಾಗಿ ಭವ್ಯ ಪರಂಪರೆ, ಸಂಸ್ಕೃತಿ ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವತ್ತ ನಾವೆಲ್ಲರೂ ಯೋಚಿಸಬೇಕಾಗಿದೆ. ಜಾತಿ, ಭಾಷೆ, ಪಂಗಡ, ಸಂಕುಚಿತ ಭಾವನೆಯಿಂದ ಹೊರಬಂದು ಸ್ನೇಹ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಿ ದೇಶದ ಒಗ್ಗಟ್ಟು ಮತ್ತು ಐಕ್ಯತೆಯನ್ನು ಕಾಪಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವು
ನೀವುಗಳೆಲ್ಲರೂ ಒಟ್ಟಾಗಿ ಸೇರಿ ಶ್ರಮಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ , ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್ ಕಲ್ಮಾಡಿ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಜಿಲ್ಲಾ. ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಅಪರ ಜಿಲಾಧಿಕಾರಿ ವೀಣಾ ಬಿ.ಎನ್, ಜಿ.ಪ ಸಿಇಒ ಪ್ರಸನ್ನ ಎಚ್, ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಗಣ್ಯರು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.