ಮನೆ ಮಾಲೀಕರಿಗೆ ಚೂರಿಯಿಂದ ಇರಿದು ಲಕ್ಷಾಂತರ ಮೌಲ್ಯದ ಆಭರಣ, ನಗದು ದರೋಡೆ

ಬೆಳ್ತಂಗಡಿ: ದುಷ್ಕರ್ಮಿಗಳ ತಂಡವೊಂದು ಮಾಲೀಕರಿಗೆ ಚೂರಿ‌ ಇರಿದು ಮನೆಯಲ್ಲಿ ಲಕ್ಷಾಂತರ ಮೌಲ್ಯದ ನಗದು, ಆಭರಣಗಳನ್ನು ದರೋಡೆ ಮಾಡಿದ ಘಟನೆ ಬೆಳ್ತಂಗಡಿ ಕೊಕ್ಕಡ ಗ್ರಾಮದ ಸೌತಡ್ಕ ದೇವಸ್ಥಾನದ ಸಮೀಪ ಇಂದು ನಸುಕಿನ ವೇಳೆ ನಡೆದಿದೆ.

ಸೌತಡ್ಕ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಇರುವ ತುಕ್ರಪ್ಪ ಶೆಟ್ಟಿ ಎಂಬವರ ಮನೆಯಲ್ಲಿ ದರೋಡೆ ನಡೆದಿದೆ. ಇಂದು ನಸುಕಿನ ವೇಳೆ ಏಕಾಏಕಿಯಾಗಿ ಮನೆಗೆ ನುಗ್ಗಿದ ಒಂಭತ್ತು ಮಂದಿ ದರೋಡೆಕೋರರ ತಂಡವು ಮನೆಯವರನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿ ತುಕ್ರಪ್ಪ ಶೆಟ್ಟಿ ಮತ್ತು ಅವರ‌ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಮನೆಯ ಬೀರುನಲ್ಲಿದ್ದ ಲಕ್ಷಾಂತರ ಮೌಲ್ಯದ ನಗದು, ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಘಟನೆ ವೇಳೆ ಮನೆಯಲ್ಲಿ ತುಕ್ರಪ್ಪ ಶೆಟ್ಟಿ, ಅವರ ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳು ಇದ್ದರು. ತುಕ್ರಪ್ಪ ಶೆಟ್ಟಿಯವರ ಪತ್ನಿಯ ಕೈಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಇದರಿಂದ ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ದರೋಡೆಕೋರರ ಪತ್ತೆಗೆ ವಿಶೇಷ ತಂಡ ರಚಿಸಿ, ತನಿಖೆ ನಡೆಸುತ್ತಿದ್ದಾರೆ.