ಮೈಕ್ರೊಸಾಫ್ಟ್​: ಮಾನವರಂತೆ ಮಾತನಾಡುವ ಟೆಕ್ಸ್ಟ್​ ಟು ಸ್ಪೀಚ್​ ಪರಿಚಯ

ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೋಸಾಫ್ಟ್ ದೃಷ್ಟಿ ಸಾಮರ್ಥ್ಯದೊಂದಿಗೆ ಹೊಸ ಟೆಕ್ಸ್ಟ್​ – ಟು – ಸ್ಪೀಚ್ ವೈಶಿಷ್ಟ್ಯ ಪರಿಚಯಿಸಿದೆ.ಇದರ ಮೂಲಕ ಟೆಕ್ಸ್ಟ್​ ಅನ್ನು ಇನ್​ಪುಟ್​ ಮಾಡಿ ಅದರಂತೆ ಮಾತನಾಡುವ ಅವತಾರ್ ವಿಡಿಯೋಗಳನ್ನು ರಚಿಸಬಹುದು ಮತ್ತು ಮಾನವರ ಚಿತ್ರಗಳನ್ನು ಬಳಸಿಕೊಂಡು ತರಬೇತಿ ಪಡೆದ ನೈಜ – ಸಮಯದ ಸಂವಾದಾತ್ಮಕ ಬಾಟ್​ಗಳನ್ನು ನಿರ್ಮಿಸಬಹುದು. ಅಜುರ್ ಎಐ ಸ್ಪೀಚ್ ಟೆಕ್ಸ್ಟ್ ಎಂದು ಕರೆಯಲ್ಪಡುವ ಮತ್ತು ಸಾರ್ವಜನಿಕರಿಗೆ ಪರಿಶೀಲನೆಗೆ ಮುಕ್ತವಾಗಿರುವ ಈ ಸಾಫ್ಟ್​ವೇರ್ ಗ್ರಾಹಕರಿಗೆ 2 ಡಿ ಫೋಟೋರಿಯಲಿಸ್ಟಿಕ್ ಅವತಾರ್​ನಲ್ಲಿ ಮಾತನಾಡುವ ಸಂಶ್ಲೇಷಿತ ವಿಡಿಯೋಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ.ಮೈಕ್ರೊಸಾಫ್ಟ್​ ತನ್ನ ಹೊಸ ಟೆಕ್ಸ್ಟ್​ ಟು ಸ್ಪೀಚ್​ ಅವತಾರ್​ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಏನಿದು ಟೆಕ್ಸ್ಟ್​​ ಟು ಸ್ಪೀಚ್​

ಟೆಕ್ಸ್ಟ್ ಟು ಸ್ಪೀಚ್ ಅವತಾರ್​ ಮೂಲಕ ಬಳಕೆದಾರರು ಹೆಚ್ಚು ಆಕರ್ಷಕ ಡಿಜಿಟಲ್ ಸಂವಹನಗಳನ್ನು ರಚಿಸಬಹುದು. ಸಂಭಾಷಣೆ ನಡೆಸುವ ವ್ಯಕ್ತಿಗಳು, ವರ್ಚುಯಲ್ ಸಹಾಯಕರು, ಚಾಟ್​ಬಾಟ್​ ಮುಂತಾದುವುಗಳನ್ನು ನಿರ್ಮಿಸಲು ಟೆಕ್ಸ್ಟ್​ ಟು ಸ್ಪೀಚ್ ಅವತಾರ್ ಅನ್ನು ಬಳಸಬಹುದು.”ನ್ಯೂರಲ್ ಟೆಕ್ಸ್ಟ್ ಟು ಸ್ಪೀಚ್ ಅವತಾರ್ ಮಾದರಿಗಳನ್ನು ಮಾನವ ವಿಡಿಯೋ ರೆಕಾರ್ಡಿಂಗ್ ಮಾದರಿಗಳ ಆಧಾರದ ಮೇಲೆ ಆಳವಾದ ನ್ಯೂರಲ್​ ಜಾಲಗಳಿಂದ ತರಬೇತಿ ನೀಡಲಾಗುತ್ತದೆ ಮತ್ತು ಅವತಾರ್​ನ ಧ್ವನಿಯನ್ನು ಟೆಕ್ಸ್ಟ್ ಟು ಸ್ಪೀಚ್ ವಾಯ್ಸ್ ಮಾದರಿಯಿಂದ ಒದಗಿಸಲಾಗುತ್ತದೆ” ಎಂದು ಕಂಪನಿ ಬುಧವಾರ ‘ಮೈಕ್ರೋಸಾಫ್ಟ್ ಇಗ್ನೈಟ್’ ಕಾರ್ಯಕ್ರಮದಲ್ಲಿ ಹೇಳಿದೆ.

ಕಂಪನಿ ಸದ್ಯ ಎರಡು ಮಾದರಿಯ ಟೆಕ್ಸ್ಟ್​ ಟು ಸ್ಪೀಚ್ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಅವು ಯಾವವು ಎಂದರೆ , ಪೂರ್ವನಿರ್ಮಿತ ಪಠ್ಯದಿಂದ ಸ್ಪೀಚ್ ಅವತಾರ್ (prebuilt text to speech avatar) ಮತ್ತು ಕಸ್ಟಮ್ ಟೆಕ್ಸ್ಟ್ ಟು ಸ್ಪೀಚ್ ಅವತಾರ್ (custom text to speech avatar).

“ಮೈಕ್ರೋಸಾಫ್ಟ್ ತನ್ನ ಅಜೂರ್ ಚಂದಾದಾರರಿಗೆ ಔಟ್ ಆಫ್ ಬಾಕ್ಸ್ ಉತ್ಪನ್ನಗಳಂತೆ ಟೆಕ್ಸ್ಟ್​ ಟು ಸ್ಪೀಚ್ ವೈಶಿಷ್ಟ್ಯ ನೀಡುತ್ತಿದೆ. ಈ ಅವತಾರ್​ಗಳು ಪಠ್ಯ ಇನ್ಪುಟ್ ಆಧಾರದ ಮೇಲೆ ವಿಭಿನ್ನ ಭಾಷೆಗಳು ಮತ್ತು ಧ್ವನಿಗಳಲ್ಲಿ ಮಾತನಾಡಬಹುದು. ಗ್ರಾಹಕರು ವಿವಿಧ ಆಯ್ಕೆಗಳಿಂದ ಅವತಾರ್ ಅನ್ನು ಆಯ್ಕೆ ಮಾಡಬಹುದು ಮತ್ತು ನೈಜ ಸಮಯದ ಅವತಾರ್ ಪ್ರತಿಕ್ರಿಯೆಗಳೊಂದಿಗೆ ವಿಡಿಯೋ ಕಂಟೆಂಟ್​ ಅಥವಾ ಸಂವಾದಾತ್ಮಕ ಅಪ್ಲಿಕೇಶನ್​ಗಳನ್ನು ರಚಿಸಲು ಅದನ್ನು ಬಳಸಬಹುದು” ಎಂದು ಕಂಪನಿ ಹೇಳಿದೆ.ಟೆಕ್ಸ್ಟ್​ ಟು ಸ್ಪೀಚ್ ಅವತಾರ ಅನ್ನು ವ್ಯಕ್ತಿಗಳು ಮತ್ತು ಸಮಾಜದ ಹಕ್ಕುಗಳನ್ನು ರಕ್ಷಿಸುವ, ಪಾರದರ್ಶಕ ಮಾನವ – ಕಂಪ್ಯೂಟರ್ ಸಂವಹನವನ್ನು ಉತ್ತೇಜಿಸುವ ಮತ್ತು ಹಾನಿಕಾರಕ ಡೀಪ್​ಫೇಕ್​ಗಳು ಮತ್ತು ದಾರಿತಪ್ಪಿಸುವ ಕಂಟೆಂಟ್​ಗಳನ್ನು ರಚಿಸದಂತೆ ವಿನ್ಯಾಸಗೊಳಿಸಲಾಗಿದೆ. ಈ ಕಾರಣಕ್ಕಾಗಿ, ಕಸ್ಟಮ್ ಅವತಾರ್ ಅನ್ನು ಬಳಸಬೇಕಾದರೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಮತ್ತು ಕೆಲವೇ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಬಳಸಬಹುದಾಗಿದೆ.