ಪುರುಷರ ಡಬಲ್ಸ್ ಪ್ರಶಸ್ತಿ :ಬ್ಯಾಡ್ಮಿಂಟನ್ ಐತಿಹಾಸಿಕ ದಾಖಲೆ ನಿರ್ಮಿಸಿದ ಸಾತ್ವಿಕ್, ಚಿರಾಗ್ ಶೆಟ್ಟಿ

ಜಕಾರ್ತ(ಇಂಡೋನೇಷ್ಯಾ): ಸೂಪರ್ 1000 ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಸೂಪರ್​ 100, 300, 500,750 ಮತ್ತು 1000 ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಈ ಜೋಡಿ ಗೆದ್ದಿದೆ.ಇಂಡೋನೇಷ್ಯಾ ಓಪನ್ 2023 ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೋಹ್ ವಿರುದ್ಧ ಗೆದ್ದ ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಭಾನುವಾರ ಇತಿಹಾಸ ಬರೆದಿದ್ದಾರೆ.ಸೂಪರ್ 1000 ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಗೆದ್ದ ಮೊದಲ ಭಾರತೀಯರು ಎಂಬ ಖ್ಯಾತಿಯನ್ನು ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಪಡೆದುಕೊಂಡಿದ್ದಾರೆ.

ವಿಶ್ವದ ಆರನೇ ಶ್ರೇಯಾಂಕದ ಸಾತ್ವಿಕ್ ಮತ್ತು ಚಿರಾಗ್ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಆರೋನ್ ಚಿಯಾ, ಸೋಹ್ ವೂಯಿ ಯಿಕ್ ಅವರನ್ನು 21-17, 21-18 ಸೆಟ್‌ಗಳಿಂದ ಸೋಲಿಸಿ ತಮ್ಮ ಮೊದಲ ಸೂಪರ್ 1000 ಪ್ರಶಸ್ತಿಯನ್ನು ಪಡೆದರು. ಶನಿವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಭಾರತದ ಜೋಡಿ 17-21, 21-19, 21-18 ರಿಂದ ಮೂರು ಕಠಿಣ ಗೇಮ್‌ಗಳಲ್ಲಿ ದಕ್ಷಿಣ ಕೊರಿಯಾದ ಕಾಂಗ್ ಮಿನ್ ಹ್ಯುಕ್ ಮತ್ತು ಸಿಯೊ ಸೆಯುಂಗ್ ಜೇ ಅವರನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿತ್ತು.
ಗೆಲುವಿನ ನಂತರ ಮಾತನಾಡಿದ ಚಿರಾಗ್​, “ಇದು ನಮಗೆ ಅದ್ಭುತ ವಾರವಾಗಿದೆ. ನಾವು ಇಂದು ಆಡಿದ ರೀತಿ ನನಗೆ ಸಂತೋಷವಾಗಿದೆ, ಏಕೆಂದರೆ ನಾವು ಅವರ ವಿರುದ್ಧ ಎಂದಿಗೂ ಗೆದ್ದಿಲ್ಲ. ಮಲೇಷ್ಯಾದ ಜೋಡಿ ವಿರುದ್ಧ ನಮ್ಮ ಹೆಡ್​ ಟು ಹೆಡ್​ ಪಂದ್ಯದ ದಾಖಲೆ ಉತ್ತಮವಾಗಿರಲಿಲ್ಲ. ಹೀಗಾಗಿ ಕಠಿಣ ಸವಾಲನ್ನು ನೀಡಲು ಬಯಸಿದ್ದೆವು ಅದರಂತೆ ಆಡಿ ಗೆದ್ದಿದ್ದೇವೆ. ಇದು ಬ್ಯಾಡ್ಮಿಂಟನ್ ಆಡಲು ಅತ್ಯುತ್ತಮ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಇಂದು ನಮಗೆ ಹುರಿದುಂಬಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇಲ್ಲಿನ ಪ್ರೇಕ್ಷಕರ ಅಭಿಮಾನ ಸರಳವಾಗಿ ಅದ್ಭುತವಾಗಿತ್ತು” ಎಂದಿದ್ದಾರೆ.

ಎರಡನೇ ಸೆಟ್​ನಲ್ಲೂ ತೀವ್ರ ಹೋರಾಟ ಈ ಎರಡು ಜೋಡಿಯಿಂದ ಕಂಡು ಬಂತು. ಆದರೆ ಮೊದಲ ಸೆಟ್​​ನಲ್ಲಿ ಪಡೆದ ಗೆಲುವಿನ ಹುರುಪಿನಲ್ಲೇ ಎರಡನೇ ಸೆಟ್​ ಆರಂಭಿಸಿದ ಭಾರತದ ಜೋಡಿ 11-7 ರ ಅಂತರ ಪಡೆದರು. ನಂತರ 13 – 9 ಅಂತರವನ್ನೂ ಸಾಧಿಸಿದರು. ಬಳಿಕ ಇದೇ ರೀತಿ ಮುಂದುವರೆದ ಭಾರತೀಯರು 16 – 11 ಮುನ್ನಡೆ ಕಂಡು, ಯಾವುದೇ ತಪ್ಪುಗಳನ್ನು ಮಾಡದೇ 21 – 18ರಲ್ಲಿ ಎರಡನೇ ಸೆಟ್​ನ್ನು ವಶಕ್ಕೆ ತೆಗೆದುಕೊಂಡರು.ಮೊದಲ ಸೆಟ್​ನ ಆರಂಭದಲ್ಲಿ ಮಲೇಷ್ಯಾದ ಜೋಡಿ ಭಾರತದ ಆಟಗಾರರನ್ನು ಹಿಮ್ಮೆಟ್ಟಿಸಿದ್ದರು. ಆರಂಭವಾದ ಕೂಡಲೇ 0-3 ರ ಹಿನ್ನಡೆ ಸಾತ್ವಿಕ್, ಚಿರಾಗ್ ಜೋಡಿ ಅನುಭವಿಸಿತು. ನಂತರ ಈ ಪಾಯಿಂಟ್​ 3-7 ರ ಹಿನ್ನಡೆಯಾಗಿತ್ತು. ಆದರೆ ಸಾತ್ವಿಕ್, ಚಿರಾಗ್ ಜೋಡಿ ಕಮ್​ಬ್ಯಾಕ್​ ಮಾಡಿದರು. ಸತತ ಆರು ಅಂಕಗಳನ್ನು ಪಡೆದ ಜೋಡಿ 11-9ರ ಮುನ್ನಡೆ ಪಡೆದುಕೊಂಡರು. ನಂತರ ಪೈಪೋಟಿ ಇನ್ನೂ ಬಿಗಿಯಾಯಿತು. ಇದರಿಂದ 17-15 ಕ್ಕೆ ಅಂತರ ಉಳಿಯಿತು. ಕೊನೆಯಲ್ಲಿ ಸರ್ವಿಸ್​ನಲ್ಲಿ ಎರಡು ಪಾಯಿಂಟ್​ ಬಿಟ್ಟು ಕೊಟ್ಟಿದ್ದರಿಂದ 17 ಅಂಕವನ್ನು ಮಲೇಷ್ಯಾ ಜೋಡಿ ಪಡೆದಕೊಂಡಿತು. ಆದರೆ ಭಾರತದ ಜೋಡಿ ನೇರ ಅಂಕಗಳಿಂದ 21-17 ರಲ್ಲಿ ಮೊದಲ ಸೆಟ್​ ವಶಪಡಿಸಿಕೊಂಡರು. ಎರಡು ನೇರ ಸೆಟ್​ಗಳಿಂದ ಈ ಜೋಡಿ ಫೈನಲ್ಸ್​ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.