‘ಮೀನುಗಾರಿಕೆ ಬೋಟ್ ನಾಪತ್ತೆ ಪ್ರಕರಣ’ ಬೋಟ್ ಶೀಘ್ರ ಪತ್ತೆಗೆ ಅಗತ್ಯ ಕ್ರಮ: ಶಾಸಕ ಕೆ. ರಘುಪತಿ ಭಟ್

ಉಡುಪಿ: ಮಲ್ಪೆಯ ಬಂದರಿನಿಂದ ಡಿ.13ರಂದು ಎಂಟು ಮಂದಿ ಮೀನುಗಾರರನ್ನು ಹೊತ್ತು ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿರುವ ಘಟನೆಗೆ ಸಂಬಂಧಿಸಿದಂತೆ ಶಾಸಕ ಕೆ. ರಘುಪತಿ ಭಟ್ ಮಂಗಳವಾರ ಮೀನುಗಾರರೊಂದಿಗೆ ಸಭೆ ನಡೆಸಿದರು.

ಬಳಿಕ ಮಾತನಾಡಿದ ಶಾಸಕರು, ಬೋಟ್ ಪತ್ತೆ ಹಚ್ಚಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ, ಕೋಸ್ಟ್ ಗಾರ್ಡ್, ಗೋವಾ ಪೊಲೀಸರು, ಕೇಂದ್ರ ಸರ್ಕಾರದೊಂದಿಗೆ ಸಹಿತ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಜೊತೆಗೂ ಮಾತುಕತೆ ನಡೆಸಿದ್ದೇವೆ. ಈ ಬಗ್ಗೆ ಶೀಘ್ರ ಸ್ಪಂದಿಸಿದ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರು ಹೆಲಿಕಾಫ್ಟರ್ ಮೂಲಕ ಸಮುದ್ರದ ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸಲು ಸಹಕರಿಸಿದ್ದಾರೆ ಎಂದರು.
ನಾಪತ್ತೆಯಾದವರ ಪೈಕಿ ಭಟ್ಕಳ, ಮಂಕಿ ಸೇರಿದಂತೆ ವಿವಿಧ ಕ್ಷೇತ್ರದ ಮೀನುಗಾರರಿದ್ದು ಅವರ ಮನೆಗಳಿಗೆ ತೆರಳಿ ಧೈರ್ಯ ಹೇಳುವಂತೆ ಅಲ್ಲಿನ ಶಾಸಕರುಗಳಿಗೆ ಶಾಸಕ ರಘುಪತಿ ಭಟ್ ಮನವಿ ಮಾಡಿದರು.
ಮಹಾರಾಷ್ಟ್ರದ ನದಿ ಕಿನಾರೆಗಳಲ್ಲಿ ಪರಿಶೀಲನೆ ನಡೆಸುವ ಬಗ್ಗೆಯೂ ಭರವಸೆ ನೀಡಿದ್ದಾರೆ.  ಸಭೆಯಲ್ಲಿ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಉಪಾಧ್ಯಕ್ಷ ಅನಿಲ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ, ಗೋಪಾಲ್ ಆರ್.ಕೆ. ಹಾಗೂ ವಡಬಾಂಡೇಶ್ವರ ನಗರಸಭಾ ಸದಸ್ಯ ಯೋಗೀಶ್, ತಾಲೂಕು ಪಂಚಾಯತ್ ಸದಸ್ಯ ಶರತ್ ಬೈಲಕೆರೆ ಉಪಸ್ಥಿತರಿದ್ದರು.