ಉಡುಪಿ: ಕರಾವಳಿ ಕರ್ನಾಟಕದ ಮೀನುಗಾರರಿಗೆ ಸರಕು ಸಾಗಾಟದ ವಾಹನದಲ್ಲಿ ಸಂಚರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ನೇತೃತ್ವದ ನಿಯೋಗ ಗುರುವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಮಳೆಗಾಲದ ಸಮಯದಲ್ಲಿ ನಾಡದೋಣಿಗಳಲ್ಲಿ ದುಡಿಯುವ ಮೀನುಗಾರರು ತಮ್ಮ ಮೀನುಗಾರಿಕಾ ಬಲೆ ಮತ್ತು ಇನ್ನಿತರ ಪರಿಕರಗಳೊಂದಿಗೆ ಮಲ್ಪೆ ಸಹಿತ ಇತರ ಬಂದರುಗಳಿಗೆ ಟೆಂಪೋ ವಾಹನದಲ್ಲಿ ತೆರಳುತ್ತಾರೆ. ಹಾಗೆಯೇ ತಲೆ ಮೇಲೆ ಬುಟ್ಟಿಯನ್ನು ಹೊತ್ತುಕೊಂಡು ದೂರದ ಊರುಗಳಿಗೆ ಮೀನು ಮಾರಾಟ ಮಾಡಲು ಹೋಗುವ ಮೀನುಗಾರ ಮಹಿಳೆಯರು ಒಟ್ಟಾಗಿ ತಮ್ಮ ತಮ್ಮ ಮೀನುಗಾರಿಕಾ ಬುಟ್ಟಿಯೊಂದಿಗೆ ಸಣ್ಣ ಗೂಡ್ಸ್ ವಾಹನಗಳಲ್ಲಿ ಸಂಚರಿಸುತ್ತಾರೆ. ಈ ಸಂದರ್ಭದಲ್ಲಿ ಇಂತಹ ವಾಹನಗಳನ್ನು ಪೊಲೀಸರು ಅಡ್ಡಗಟ್ಟಿ ಪ್ರಕರಣ ದಾಖಲಿಸುತ್ತಿದ್ದಾರೆ.
ನಾಡದೋಣಿ ಮೀನುಗಾರರು ತಮ್ಮ ಮೀನುಗಾರಿಕಾ ಪರಿಕರಗಳೊಂದಿಗೆ ಮುಂಜಾನೆ ಮೂರುಗಂಟೆಗೆ ತೆರಳುವ ಸಂದರ್ಭದಲ್ಲಿ ಯಾವುದೇ ಬಸ್ಸಿನ ವ್ಯವಸ್ಥೆ ಇಲ್ಲ. ಹಾಗಾಗಿ ಅವರು ಗೂಡ್ಸ್ ವಾಹನಗಳನ್ನೇ ಅವಲಂಬಿಸುತ್ತಾರೆ. ಅಲ್ಲದೆ, ಮೀನುಗಾರ ಮಹಿಳೆಯರಿಗೆ ತಮ್ಮ ಮೀನಿನ ಬುಟ್ಟಿಯೊಂದಿಗೆ ಸಂಚರಿಸಲು ಬಹುತೇಕ ಬಸ್ ಗಳಲ್ಲಿ ಅವಕಾಶ ನೀಡುವುದಿಲ್ಲ. ಹಾಗಾಗಿ ಸರಕು ಸಾಗಾಟ ವಾಹನಗಳಲ್ಲಿ ಪ್ರಯಾಣಿಸುವುದು ಅನಿವಾರ್ಯ. ಆದ್ದರಿಂದ ಈ ಮೀನುಗಾರರಿಗೆ ವಿಶೇಷ ವಿನಾಯಿತಿ ನೀಡಿ ಸರಕು ವಾಹನದಲ್ಲಿ ಪ್ರಯಾಣಿಸಲು ಅವಕಾಶ ನೀಡಬೇಕು. ನಮ್ಮ ಸುರಕ್ಷತೆಯ ಜವಾಬ್ದಾರಿಯನ್ನು ನಾವೇ ವಹಿಸಿಕೊಳ್ಳುತ್ತೇವೆ ಎಂದು ಹೇಳಿದರು.
ನಿಯೋಗದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಸದಸ್ಯರಾದ ಲೀಲಾಧರ ಪಡುಬಿದ್ರಿ, ವಿನಯ ಕರ್ಕೇರ, ರವೀಂದ್ರ ಶ್ರಿಯಾನ್, ದಾಸ ಕೋಟ ಇದ್ದರು.