ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣ: ಐಎನ್ ಎಸ್ ಕೊಚ್ಚಿ ಯುದ್ಧ ನೌಕೆಯಿಂದ ಸಮುದ್ರದ ತಳದಲ್ಲಿ ಶೋಧ

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಹಾಗೂ ಏಳು ಮಂದಿ ಮೀನುಗಾರರು ಕಣ್ಮರೆಯಾಗಿ 34 ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಯಾವುದೇ ಅವಘಡಕ್ಕೆ ತುತ್ತಾಗಿ ಸಮುದ್ರದೊಳಗೆ ಮುಳುಗಿರಬಹುದೆಂಬ ಸಂಶಯದ ಮೇರೆಗೆ ಭಾರತೀಯ ನೌಕಾ ಪಡೆ ತನ್ನ ಐಎನ್ಎಸ್ ಕೊಚ್ಚಿ ಎಂಬ ಯುದ್ಧ ನೌಕೆಯ ಮೂಲಕ ಸಮುದ್ರ ತಳಭಾಗದಲ್ಲಿ ಶೋಧಕಾರ್ಯ ಆರಂಭಿಸಿದೆ.
ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟು ಮತ್ತು ಅದರಲ್ಲಿದ್ದ ಮಾಲೀಕ ಚಂದ್ರಶೇಖರ ಕೋಟ್ಯಾನ್ ಸೇರಿ 7 ಮಂದಿ ಮೀನುಗಾರರು ಡಿ.15ರಂದು ಮಧ್ಯರಾತ್ರಿ 1 ಗಂಟೆಗೆ ಮಹಾರಾಷ್ಟ್ರದ ಸಿಂಧುದುರ್ಗಾ ಜಿಲ್ಲೆಯ ತೀರದಿಂದ 40 – 45 ನಾಟಿಕಲ್ ಮೈಲಿ ದೂರ ಸಮುದ್ರದಲ್ಲಿ ವಯರ್ ಲೆಸ್ ಹಾಗೂ ದೂರವಾಣಿ ಸಂಪರ್ಕವನ್ನು ಕಡಿದುಕೊಂಡು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ.
ಆರಂಭದಲ್ಲಿ ಈ ಮೀನುಗಾರರನ್ನು ಬೋಟು ಸಹಿತ ಅಪಹರಣ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಅದರಂತೆ ಕರ್ನಾಟಕ – ಮಹಾರಾಷ್ಟ್ರ ಪೊಲೀಸರು, ಕರಾವಳಿ ರಕ್ಷಣಾ ಪಡೆ ಮತ್ತು ನೌಕ ಸೇನೆಗಳು ಜಂಟಿಯಾಗಿ ಮಹಾರಾಷ್ಟ್ರ ತೀರದುದ್ದಕ್ಕೂ ಸುದೀರ್ಘ ಕಾರ್ಯಾಚರಣೆ ಮಾಡಿದ್ದವು. ಆದರೆ ಬೋಟ್ ಹಾಗೂ ಮೀನುಗಾರರ ಯಾವುದೇ ಸುಳಿವು ಲಭ್ಯವಾಗಿಲ್ಲ. ಹೀಗಾಗಿ ಮೀನುಗಾರರು ಅಪಹರಣಕ್ಕೊಳಗಾಗಿರುವ ಸಾಧ್ಯತೆ ಕಡಿಮೆ ಎಂಬ ನಿರ್ಧಾರಕ್ಕೆ ತನಿಖಾಧಿಕಾರಿಗಳು ಬಂದಿದ್ದಾರೆ. ಅಲ್ಲದೆ ಸಾಗರದ ತಳದಲ್ಲಿ ಶೋಧ ಮಾಡಲು ಆರಂಭಿಸಿದ್ದಾರೆ.
ಮೀನುಗಾರರು ಒಪ್ಪಲು ಸಿದ್ಧರಿಲ್ಲ:
ಈವರೆಗೆ ತಮ್ಮ 40 – 50 ವರ್ಷಗಳ ಮೀನುಗಾರಿಕೆಯ ಅನುಭವದಲ್ಲಿ ಇಂತಹ ಘಟನೆ ಸಂಭವಿಸಿಲ್ಲ. ಆಗಿದ್ದರೂ ಮೀನುಗಾರರು ಮುಳುಗುವ ಸಾಧ್ಯತೆ ಕಡಿಮೆ. ಅವರ ರಕ್ಷಣೆಗೆ ಬೇಕಾದ ಉಪಕರಣಗಳು ಬೋಟ್ ನಲ್ಲಿದ್ದವು. ಹಾಗಾಗಿ ಅವರು ಹೇಗಾದರೂ ಬಚಾವಾಗಿ ಬರುತ್ತಿದ್ದರು ಎನ್ನುವ ಮೀನುಗಾರರು ಬೋಟ್ ದುರಂತಕ್ಕೀಡಾಗಿರುವುದನ್ನು ಇವತ್ತಿಗೂ ಒಪ್ಪಲು ತಯಾರಿಲ್ಲ.