ಮೀನುಗಾರರನ್ನು ಸುರಕ್ಷಿತವಾಗಿ ಕರೆತರಲು ಪ್ರಾಮಾಣಿಕ ಪ್ರಯತ್ನ:ಎಂ.ಬಿ ಪಾಟೀಲ್

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಎಲ್ಲ ರೀತಿಯ ಶೋಧ ಕಾರ್ಯವನ್ನು ಮಾಡುತ್ತಿದೆ. ಮೀನುಗಾರರನ್ನು ಸುರಕ್ಷಿತವಾಗಿ ಕರೆತರಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಅವರು ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಈ ವಿಚಾರದಲ್ಲಿ ರಾಜಕೀಯ ಬೇಡ. ಎರಡು ಸರಕಾರಗಳು ಮೀನುಗಾರರ ಹುಡುಕಾಟಕ್ಕೆ ಶಕ್ತಿಮೀರಿ ಪ್ರಯತ್ನ ಮಾಡುತ್ತಿದೆ ಎಂದರು.
ಈಗಾಗಲೇ ದಿನಕ್ಕೆ ನಾಲ್ಕು ತಾಸು ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ, ಮಹಾರಾಷ್ಟ್ರ ಸಿಂಧೂದುರ್ಗಾ ಕಡಲ ತೀರದಲ್ಲಿ ಸಿಕ್ಕಿದೆ ಎನ್ನಲಾದ ಮೀನುಗಾರಿಕೆಗೆ ಬಳಸುವ ಪ್ಲಾಸ್ಟಿಕ್ ವಸ್ತುಗಳ ಕುರಿತು ಅಲ್ಲಿನ ಎಸ್ಪಿ ಖುದ್ದಾಗಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಅಲ್ಲಿ ಸಿಕ್ಕಿರುವ ಮೀನು ಹಾಕುವ ಬಾಕ್ಸ್ ನಲ್ಲಿ ‘ಎಸ್ ಬಿ’ ಬರೆಯಲಾಗಿದ್ದು, ಅದು ಸುವರ್ಣ ತ್ರಿಭುಜ ಬೋಟ್ ನದ್ದು ಹೇಳಲಾಗುತ್ತಿದೆ. ಅದನ್ನು ಅಳಿಸಿ ಅಲ್ಲಿನ ಮೀನುಗಾರರು ತಮ್ಮ ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆಯೂ ಸೂಕ್ತ ತನಿಖೆ ಮಾಡಲಾಗುವುದು ಎಂದು ತಿಳಿಸಿದರು.
ಮೀನುಗಾರರನ್ನು ಭಯೋತ್ಪಾದಕರು ಅಪಹರಣ ಮಾಡಿರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಅಲ್ಲದೆ ಅಪಹರಣ ಮಾಡಿರುವ ಸಾಧ್ಯತೆಯೂ ಕಡಿಮೆ ಎಂದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಗ್ರಹ ಸಚಿವರೊಂದಿಗೆ ಸದ್ಯದಲ್ಲೇ ಸಭೆ ನಡೆಸಿ, ಕರಾವಳಿ ಕರ್ನಾಟಕದ ಮೀನುಗಾರರು ಎದುರಿಸುವ ಸಮಸ್ಯೆಗಳನ್ನು ಅವರೊಂದಿಗೆ ಚರ್ಚಿಸಿ, ಅದಕ್ಕೆ ಪರಿಹಾರಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಮೀನುಗಾರರು ಅಪಾಯದಲ್ಲಿ ಸಿಲುಕಿಕೊಂಡಾಗ ಕೂಡಲೇ ಕರಾವಳಿ ಕಾವಲು ಪಡೆಗೆ ಮಾಹಿತಿ ರವಾನಿಸುವ ಸ್ಯಾಟಲೈಟ್ ಆಧಾರಿತ ಉಪಕರಣಗಳನ್ನು ಬೋಟ್ ಗಳಿಗೆ ಪ್ರಯತ್ನಿಸಲಾಗುವುದು. ಆ ಮೂಲಕ ಮೀನುಗಾರರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ, ಪಶ್ಚಿಮ ವಿಭಾಗದ ಐಜಿಪಿ ಅರುಣ್ ಚಕ್ರವರ್ತಿ, ಶಾಸಕರಾದ ರಾಘುಪತಿ ಭಟ್, ಸುಕುಮಾರ್ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಮೊದಲಾದವರು ಹಾಜರಿದ್ದರು.