ಮತಗಟ್ಟೆ ಸಮೀಪ ಪಕ್ಷಗಳ ಬೂತ್ ಅನುಮತಿ ಅಗತ್ಯ: ಜಿಲ್ಲಾಧಿಕಾರಿ

ಉಡುಪಿ: ಏಪ್ರಿಲ್ 18 ರಂದು  ನಡೆಯುವ  ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾನದ ದಿನದಂದು, ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ಪರವಾಗಿ ಮತಗಟ್ಟೆಯ 200 ಮೀಟರ್ ದೂರದಲ್ಲಿ ಸರಳವಾಗಿ ಬೂತ್ ರಚಿಸಬೇಕು, ಬೂತ್ ರಚಿಸಲು ಸ್ಥಳೀಯ ಗ್ರಾಮ ಪಂಚಾಯತ್ ಅಥವಾ  ಪುರಸಭೆ, ನಗರಸಭೆಯ, ಪಟ್ಟಣ ಪಂಚಾಯತ್‍ನಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ  ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.

ಅವರು ಸೋಮವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಲೋಕಸಭಾ ಚುನವಣೆಯಲ್ಲಿ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದರು.

ಪ್ರತೀ ಬೂತ್ ನಲ್ಲಿ ಒಂದು ಟೇಬಲ್ ಮತ್ತು 2 ಕುರ್ಚಿ ಹಾಕಲು,  3*1.5 ಅಡಿ ಅಳತೆಯ ಬ್ಯಾನರ್ ಮಾತ್ರ ಅಳವಡಿಸಲು ಅವಕಾಶವಿದೆ. ಶಾಮಿಯಾನ ಅಥವಾ ಟೆಂಟ್ ಹಾಕಲು ಅವಕಾಶವಿಲ್ಲ. ಬೂತ್ ನಲ್ಲಿ ಜನಜಂಗುಳಿ ಸೇರಬಾರದು, ಯಾವುದೇ ಪ್ರಚಾರ ಸಾಮಗ್ರಿ ಪ್ರದರ್ಶಿಸಬಾರದು. ಬೂತ್ ನಲ್ಲಿ ಕಾರ್ಯ ನಿರ್ವಹಿಸುವ ವ್ಯಕ್ತಿಗಳು ಸ್ಥಳೀಯರಾಗಿದ್ದು, ಎಪಿಕ್ ಕಾರ್ಡ್ ನ್ನು ಹೊಂದಿರಬೇಕು.

ಬೂತ್ ಹಾಕಲು ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳು ನೀಡುವ ಮನವಿಗೆ ಆಯಾ ಗ್ರಾಮ ಪಂಚಾಯತ್ ಅಥವಾ ನಗರ ಸ್ಥಳೀಯ ಸಂಸ್ಥೆಗಳು ತಕ್ಷಣವೇ ಅನುಮತಿ ನೀಡಬೇಕು ಎಂದು ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಸ್ಥರಿಗೆ ಡಿಸಿ ಸೂಚಿಸಿದರು.

ಮತದಾನದ ದಿನದಂದು ಅಭ್ಯರ್ಥಿ ಮತ್ತು ಏಜೆಂಟ್ ಸಂಚರಿಸಲು ವಾಹನಕ್ಕೆ ಅನುಮತಿ ನೀಡಲಾಗುವುದು, ಈ ವಾಹನದಲ್ಲಿ ಚಾಲಕ ಸೇರಿ ಗರಿಷ್ಠ 5 ಮಂದಿ ಮಾತ್ರ ಪ್ರಯಾಣಿಸಲು ಅವಕಾಶವಿದ್ದು, ಅಭ್ಯರ್ಥಿ ಹೆಸರಲ್ಲಿ ವಾಹನ ಪಡೆದು ಇತರರು ಅದನ್ನು ಉಪಯೋಗಿಸಲು ಅವಕಾಶವಿಲ್ಲ ಎಂದು ಡಿಸಿ ಹೇಳಿದರು.