ಮತದಾರರ ವಿಶ್ವಾಸ ಹೆಚ್ಚಿಸುತ್ತದೆ ಈ ಯಂತ್ರ: ಈ ವಿವಿ ಪ್ಯಾಟ್ ಬಗ್ಗೆ ನಿಮಗೆ ಗೊತ್ತಾ?

ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವೇ ಮತದಾನ, ಯಾವುದೇ ಧರ್ಮ, ಅಂತಸ್ತು, ಲಿಂಗ ಬೇಧವಿಲ್ಲದೇ ಪ್ರತಿಯೊಬ್ಬ ನಾಗರೀಕರೂ ಸಮಾನವಾಗಿ ಪಡೆದಿರುವ ಮತದಾನದ ಹಕ್ಕು , ತಮ್ಮ ಆಯ್ಕೆಯ ಯೋಗ್ಯ ಪ್ರತಿನಿಧಿಯನ್ನು ಆರಿಸಲು ದೊರೆತಿರುವ ಮುಕ್ತ ಸ್ವಾತಂತ್ರ್ಯ.

ಈ ಮತದಾನ ಪ್ರಕ್ರಿಯೆಯಲ್ಲಿ, ಮತದಾರರು ಚಲಾಯಿಸುವ ಮತ , ತಮ್ಮ ಆಯ್ಕೆಯ ವ್ಯಕ್ತಿಗೆ ದೊರೆತಿದೆ ಎಂಬುದನ್ನು ಖಾತರಿ ಪಡಿಸಲು ಚುನಾವಣಾ ಆಯೋಗ ಒದಗಿಸಿರುವ ವಿವಿ ಪ್ಯಾಟ್  ಯಂತ್ರ , ಮತದಾನದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ವಿಶ್ವಾಸಾರ್ಹತೆ ಮೂಡಿಸುತ್ತದೆ.

ಹಿಂದೆ ಮತದಾನ ಸಂದರ್ಭದಲ್ಲಿ ಮತಪತ್ರಗಳನ್ನು ಬಳಸುತ್ತಿದ್ದು, ಇದರಿಂದ ಚುನಾವಣಾ ಪ್ರಕ್ರಿಯೆ ಅತ್ಯಂತ ನಿದಾನಗತಿಯಲ್ಲಿ ನಡೆಯುತ್ತಿತ್ತು ಇದನ್ನು ಸರಿಪಡಿಸುವ ಉದ್ದೇಶದಿಂದ ಚುನಾವಣಾ ಆಯೋಗ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಕೆಯನ್ನು ಜಾರಿಗೆ ತಂದಿತು, ಇದರಿಂದ ಶೀಘ್ರದಲ್ಲಿ  ಮತದಾನ ಮುಗಿದು ಮತ್ತು ಅತ್ಯಂತ ನಿಖರವಾಗಿ ಮತ್ತು ತ್ವರಿತಗತಿಯಲ್ಲಿ ಅಭ್ಯರ್ಥಿಯ ಆಯ್ಕೆ ಘೋಷಣೆ ನಡೆಯಲು ಸಾದ್ಯವಾಯಿತು.

ಆದರೆ ಎಲೆಕ್ಟ್ರಾನಿಕ್ ಮತಯಂತ್ರಗಳ ಬಗೆಗಿನ ಅಪಪ್ರಚಾರದಿಂದ ಮತದಾರರು ಗೊಂದಲಕ್ಕೊಳಗಾದ ಸಂದರ್ಭದಲ್ಲಿ, ಮತದಾರರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಮತಯಂತ್ರಗಳಿಗೆ ವಿವಿ ಪ್ಯಾಟ್ ಯಂತ್ರಗಳನ್ನು ಚುನಾವಣಾ ಆಯೋಗ ಅಳವಡಿಸಿದೆ.

ಏನಿದು ವಿವಿ ಪ್ಯಾಟ್: 

ವೋಟರ್ ವೆರಿಫಯಬಲ್ ಪೇಪರ್ ಆಡಿಟ್ ಟ್ರೆಯಲ್ ಹೆಸರೇ ಸೂಚಿಸುವಂತೆ,  ಮತದಾರ ತಾನು ಹಾಕಿದ ಅಮೂಲ್ಯ ಮತವನ್ನು ಸ್ವಯಂ ಪರಿಶೀಲಸಿಕೊಳ್ಳಬಲ್ಲ ಪೇಪರ್ ಮುದ್ರಿತ ಯಂತ್ರ,   ಮತಗಟ್ಟೆಯಲ್ಲಿ ಮತ ಚಲಾಯಿಸುವ ಎಲೆಕ್ಟ್ರಾನಿಕ್ ಮತಯಂತ್ರದ ಪಕ್ಕದಲ್ಲಿ ಮತ್ತೊಂದು ಯಂತ್ರ ಇರುತ್ತದೆ, ಮತಯಂತ್ರದಲ್ಲಿ ನೀವು ನಿಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸಿದಾಗ, ವಿವಿ ಪ್ಯಾಟ್ ಯಂತ್ರದಲ್ಲಿ ನೀವು ಚಲಾಯಿಸದ ಮತ , ನೀವು ಮತಯಂತ್ರದಲ್ಲಿ ಆಯ್ಕೆ ಮಾಡಿದ ಅಭ್ಯರ್ಥಿಗೆ ಚಲಾವಣೆಯಾಗಿರುವ ಕುರಿತ , ಅಭ್ಯರ್ಥಿಯ ಕ್ರಮ ಸಂಖ್ಯೆ, ಹೆಸರು ಮತ್ತು ಚಿಹ್ನೆಯನ್ನು ಒಳಗೊಂಡು ಚೀಟಿಯ ಮುದ್ರಿತ ವಿವರಗಳನ್ನು  7 ಸೆಕೆಂಡ್ ಗಳ ಕಾಲ ವೀಕ್ಷಿಸಬಹುದು, ನಂತರ ಆ ವಿವರದ ಚೀಟಿ,  ವಿವಿ ಪ್ಯಾಟ್ ಯಂತ್ರದಲ್ಲಿ ಅಳವಡಿಸಿರುವ ಪೆಟ್ಟಿಗೆಯಲ್ಲಿ ಮುದ್ರಿತವಾಗಿ ಬೀಳುತ್ತದೆ, ಈ ಮುದ್ರಿತ ಪ್ರತಿಯನ್ನು ಯಾರಿಗೂ ನೀಡುವುದಿಲ್ಲ, ವಿವಿ ಪ್ಯಾಟ್ ನಲ್ಲಿನ  ಸೀಲ್ ಮಾಡಿದ ಬಾಕ್ಸ್ ನಲ್ಲಿ ಈ ಪ್ರತಿ ಇರಲಿದೆ. ಇದರಿಂದ ಯಾವುದೇ ಗೊಂದಲ, ಅನುಮಾನ ಗಳಿಗೆ ಅವಕಾಶವಿಲ್ಲದಂತೆ, ತನ್ನ ಅಮೂಲ್ಯ ,ಮತ ತನ್ನ ಆಯ್ಕೆಯ ಅಭ್ಯರ್ಥಿಗೆ ಚಲಾವಣೆಯಾಗಿದೆ ಎಂದು ಸ್ವಯಂ ಮತದಾರರೇ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.

ಚುನಾವಣಾ ಸಮಯದಲ್ಲಿ ಸಾರ್ವಜನಿಕರಲ್ಲಿ ಮತದಾನ ಪ್ರಕ್ರಿಯೆ ಕುರಿತು ಇನ್ನಿಲ್ಲದ ಗೊಂದಲ ಮೂಡಿಸುವ ಕಿಡಿಗೇಡಿಗಳು ಎಚ್ಚರವಾಗಿರಲಿ, ಏಕೆಂದರೆ ವಿವಿ ಪ್ಯಾಟ್ ಯಂತ್ರದ ವಿರುದ್ದ  ತಪ್ಪು ಆಪಾದನೆ ಮಾಡುವ ಕಿಡಿಗೇಡಿಗಳಿಗೆ ಕಾರಾಗೃಹವಾಸದ ಶಿಕ್ಷೆ ಖಚಿತ.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸಹ ಈ ವಿವಿ ಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದ್ದು, ಈ ಯಂತ್ರದ ಕಾರ್ಯ ವೈಖರಿ ಕುರಿತಂತೆ ಪ್ರತಿಯೊಬ್ಬ ಸಾರ್ವಜನಿಕರಿಗೂ , ಜಿಲ್ಲಾ ಸ್ವೀಪ್ ಸಮಿತಿಗಳ ವತಿಯಿಂದ  ಸಾರ್ವಜನಿಕ ಸ್ಥಳದಲ್ಲಿ ಪ್ರಾತ್ಯಕ್ಷಿಕೆ ತೋರಿಸುವುದರ ಮೂಲಕ ಮತದಾರರಿಗೆ ತಮ್ಮ ಮತ ಚಲಾವಣೆಯ ಖಾತ್ರಿ ಮೂಡಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಏಪ್ರಿಲ್ 18 ಮತ್ತು 23 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ, ಮತದಾರರು ಯಾವುದೇ ಅನುಮಾನ ಗೊಂದಲಗಳಿಗೆ ಒಳಗಾಗದೇ , ವಿವೇಚನೆ ಬಳಸಿ,  ನಿಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸಿ, ನಿಮ್ಮ ಮತ ಸರಿಯಾದ ವ್ಯಕ್ತಿಗೆ ಹಾಕಿರುವ ಕುರಿತು  ವಿವಿ ಪ್ಯಾಟ್ ನಿಂದ ಖಾತರಿಪಡಿಸಿಕೊಳ್ಳಿ.