ಉಡುಪಿ: ಉಡುಪಿ ಜಿಲ್ಲೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಹೊಂದಿದೆ. ಏಕತೆಯ ಸಂಕೇತವಾಗಿರುವ ಉಡುಪಿಯಲ್ಲಿ ಮಾರ್ವಾಡಿ ಹಠಾವೋ ಅಂತಹ ಯಾವುದೇ ಹಠಾವೋ ಅಭಿಯಾನಗಳು ನಡೆಯುತ್ತಿರುವುದು ಸರಿಯಲ್ಲ. ಇದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಉಡುಪಿ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಯುತ್ತಿರುವ ‘ಮಾರ್ವಾಡಿ ಹಠಾವೋ’ ಎಂಬ ಅಭಿಯಾನವನ್ನು ಖಂಡಿಸಿದರು
‘ಏಕ್ ಭಾರತ್ ಶೇಷ್ಠ ಭಾರತ್’ ಎಂಬ ಪ್ರಧಾನಿ ನರೇಂದ್ರ ಮೋದಿ ಪರಿಕಲ್ಪನೆಯಂತೆ ದೇಶದೆಲ್ಲೆಡೆ ವಿವಿಧ ಸಮುದಾಯಗಳ ಜನತೆ ವಿವಿಧ ರಾಜ್ಯಗಳಲ್ಲಿ ಯಶಸ್ವಿ ಉದ್ಯಮವನ್ನು ನಡೆಸಿಕೊಂಡು ಸ್ವಾವಲಂಬನೆಯ ಚಿಂತನೆಯ ಜೊತೆಗೆ ರಾಷ್ಟ್ರದ ಆರ್ಥಿಕತೆಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ದೇಶದ ನಾಗರಿಕನೊಬ್ಬ ದೇಶದ ಯಾವುದೇ ಪ್ರದೇಶಗಳಲ್ಲಿ ಜೀವನೋಪಾಯ ಹಾಗೂ ಅಭಿವೃದ್ಧಿಗಾಗಿ ವ್ಯವಹಾರ ನಡೆಸಲು ಅವಕಾಶವಿದೆ.
ಉಡುಪಿ ಜಿಲ್ಲೆಯ ಸಾವಿರಾರು ಮಂದಿ ದೇಶ-ವಿದೇಶಗಳಲ್ಲಿ ಉದ್ದಿಮೆ, ವ್ಯವಹಾರಗಳನ್ನು ನಡೆಸುತ್ತಿರುವುದು ವಾಸ್ತವ. ಇದಕ್ಕೆ ಪೂರಕವಾಗಿ ಉಡುಪಿ ಹೋಟೆಲ್‌ಗಳು ಇಂದು ದೇಶದಾದ್ಯಂತ ಅತ್ಯಂತ ಪ್ರಸಿದ್ಧಿಯನ್ನು ಹೊಂದಿವೆ. ಉಡುಪಿಯಾದ್ಯಂತ ಉದ್ಯಮ ನಡೆಸುತ್ತಿರುವ ವಿವಿಧ ರಾಜ್ಯಗಳ ವ್ಯವಹಾರಸ್ಥರಿಗೆ ‘ಮಾರ್ವಾಡಿ ಹಠಾವೋ’ ಎಂಬ ರೀತಿಯ ಅಭಿಯಾನಗಳ ಮೂಲಕ ತೊಂದರೆ ಕೊಡುವುದನ್ನು ಬಿಜೆಪಿ ಖಂಡಿಸುತ್ತದೆ. ಇಂತಹ ಯಾವುದೇ ಅನಪೇಕ್ಷಿತ ಹೇಳಿಕೆಗಳು ಅಥವಾ ಚಟುವಟಿಕೆಗಳನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಯಾವುದೇ ವ್ಯವಹಾರಸ್ಥರನ್ನು ಗುರಿಯಾಗಿಸಿ ಯಾವುದೇ ವ್ಯಕ್ತಿ ಅಥವಾ ಗುಂಪು ನೀಡುವ ಅಸಂಬದ್ಧ ಪೊಳ್ಳು ಬೆದರಿಕೆಗಳಿಗೆ ಬಿಜೆಪಿ ಸೊಪ್ಪು ಹಾಕುವುದಿಲ್ಲ. ಜಿಲ್ಲೆಯ ಯಾವುದೇ ಉದ್ದಿಮೆ ಅಥವಾ ವ್ಯವಹಾರಸ್ಥರು ಅನಗತ್ಯ ಗೊಂದಲಕ್ಕೀಡಾಗುವ ಅಗತ್ಯವಿಲ್ಲ.
ಬಿಜೆಪಿ ಜಿಲ್ಲೆಯ ಎಲ್ಲ ವರ್ಗದ ವ್ಯವಹಾರಸ್ಥರ ಜೊತೆಯೂ ಇದೆ. ಈ ಹಿಂದೆಯೂ ಉಡುಪಿಯಲ್ಲಿ ಬೇರೆ ಬೇರೆ ರಾಜ್ಯಗಳ ವ್ಯವಹಾರಸ್ಥರಿಗೆ ತೊಂದರೆಯುಂಟಾದ ಸಂದರ್ಭದಲ್ಲಿಯೂ ಬಿಜೆಪಿ ಧೈರ್ಯ ತುಂಬಿದೆ. ಇಂತಹ ಪ್ರಾದೇಶಿಕವಾರು ಕ್ಷುಲ್ಲಕ ಹೇಳಿಕೆಗಳು ದೇಶದ ಏಕತೆಗೆ ಮಾರಕವಾಗಿವೆ. ಎಲ್ಲರೂ ಜಿಲ್ಲೆ ಹಾಗೂ ದೇಶದ ಅಖಂಡತೆ, ಏಕತೆ ಮತ್ತು ಸಮಗ್ರತೆಗೆ ತಮ್ಮದೇ ಆದ ಕೊಡುಗೆ ನೀಡುವುದು ಇಂದಿನ ಅಗತ್ಯತೆ ಎಂದು ಕುಯಿಲಾಡಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಮಾಧ್ಯಮ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.