ನವದೆಹಲಿ: ದೇಶದಲ್ಲಿ ತೈಲ ಬೆಲೆ ಏರಿಕೆಯ ಬೆನ್ನಲ್ಲೇ ವಿವಿಧ ಕಂಪೆನಿಗಳ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಆದರೆ, ರಸ್ತೆಗಿಳಿದಿರುವ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಲು ಸೂಪರ್ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ಗಳಿಲ್ಲ ಎಂಬ ಕೊರಗು ಗ್ರಾಹಕರಲ್ಲಿದೆ. ಈ ಕೊರಗನ್ನು ಮನಗಂಡಿರುವ ಮಾರುತಿ ಸುಜುಕಿ ಕಂಪೆನಿ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರವೊಂದನ್ನು ಪರಿಚಯಿಸಲು ಮುಂದಾಗಿದೆ.
ಈ ಕಾರಿನ ವಿಶೇಷತೆ ಎಂದರೆ ಇದಕ್ಕೆ ಪೆಟ್ರೋಲ್-ಡೀಸೆಲ್ ಬೇಕಿಲ್ಲ. ಹಾಗೆಯೇ ಚಾರ್ಜ್ ಕೂಡ ಮಾಡಬೇಕಿಲ್ಲ. ಹಾಗಾದ್ರೆ ಈ ಕಾರು ಹೇಗೆ ಚಲಿಸುತ್ತದೆ ಎಂಬ ಪ್ರಶ್ನೆ ನೀವು ಕೇಳ್ಬಹುದು. ಇದಕ್ಕೆ ಕಂಪೆನಿ ನೀಡುವ ಉತ್ತರ ಈ ಕಾರಿನ ಬ್ಯಾಟರಿಗಳು ಸ್ವಯಂ ಚಾಲಿತವಾಗಿ ಚಾರ್ಜ್ ಆಗಲಿದೆ. ಅಂದರೆ ವಾಹನವನ್ನು ಓಡಿಸುವಾಗ ಬ್ಯಾಟರಿಗಳು ಆಟೋಮ್ಯಾಟಿಕ್ ಚಾರ್ಜ್ ಆಗಲಿದ್ದು, ಅದರಂತೆ ಇಂಧನ ತುಂಬಿಸದೇ ಅಥವಾ ಚಾರ್ಜ್ ಸ್ಟೇಷನ್ಗೆ ಹೋಗದೇ ಕಾರನ್ನು ಓಡಿಸುತ್ತಲೇ ಇರಬಹುದು. ಇದರಿಂದ ಇಂಧನದ ಖರ್ಚು-ವೆಚ್ಚ ಕೂಡ ವಾಹನ ಬಳಕೆದಾರರಿಗೆ ಉಳಿತಾಯವಾಗಲಿದೆ.
ಈ ಕಾರುಗಳಲ್ಲಿ, ಎಲೆಕ್ಟ್ರಿಕ್ ಚಾರ್ಜಿಂಗ್ಗಾಗಿ ರಚಿಸಲಾದ ವಿಶೇಷ ಇಂಟರ್ನಲ್ ಕಂಬುಷ್ಟನ್ ಎಂಜಿನ್ (ICE-electrified vehicles) ನೀಡಲಾಗುತ್ತಿದ್ದು, ಇದು ಬ್ಯಾಟರಿಗಳಿಗೆ ಪವರ್ ನೀಡುತ್ತದೆ. ಅಂದರೆ ವಾಹನದ ಚಕ್ರದ ತಿರುಗುವಿಕೆಯ ಜೊತೆಗೆ ಕಾರಿನಲ್ಲಿ ನೀಡಲಾಗಿರುವ ಬ್ಯಾಟರಿಗಳು ಆಟೋಮ್ಯಾಟಿಕ್ ಆಗಿ ಚಾರ್ಜ್ ಆಗುತ್ತದೆ. ಇದರಿಂದ ಬ್ಯಾಟರಿ ಚಾರ್ಜ್ಗಾಗಿ ಬೇರೆ ಪಾವತಿಸಬೇಕಾಗಿಲ್ಲ.
ಜಪಾನಿನ ಟೊಯೋಟಾ ಕಂಪೆನಿಯ ಜೊತೆಗೂಡಿ ಮಾರುತಿ ಸುಜುಕಿ ಈ ಹೈಬ್ರಿಡ್ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸುತ್ತಿದ್ದು, ಮುಂದಿನ ತಿಂಗಳಿನಿಂದ ಕೆಲವು ಎಲೆಕ್ಟ್ರಿಕ್ ವಾಹನಗಳ ಜಂಟಿ ಪರೀಕ್ಷೆ ನಡೆಸಲಿದ್ದೇವೆ ಎಂದು ಮಾರುತಿ ಸುಜುಕಿ ಕಂಪೆನಿಯ ಕಾರ್ಪೊರೇಟ್ ಕಾರ್ಯನಿರ್ವಾಹಕ ನಿರ್ದೇಶಕ ತಿಳಿಸಿದ್ದಾರೆ.