ಮಾರಣಕಟ್ಟೆ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ, ಎಲ್ಲೆಲ್ಲೂ ಜನ ಜಾತ್ರೆಯ ವೈಭವ

ಕುಂದಾಪುರ : ಉಡುಪಿ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕ್ಷೇತ್ರ ಎನ್ನುವ ಹೆಸರನ್ನು ಪಡೆದುಕೊಂಡಿರುವ ತಾಲ್ಲೂಕಿನ ಮಾರಣಕಟ್ಟೆಯ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಹಾಗೂ ಗುರುವಾರ ನಡೆಯಲಿರುವ ಕೆಂಡ ಮಹೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವಕ್ಕಾಗಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಮಕರ ಸಂಕ್ರಾಂತಿಯಂದು ರಾತ್ರಿ ನಡೆಯುವ ಕೆಂಡ ಮಹೋತ್ಸವದಲ್ಲಿ ಜಾತಿ ಬೇಧವಿಲ್ಲದೆ, ಮಹಿಳೆಯರು, ಗಂಡಸರು, ಮಕ್ಕಳೆನ್ನದೆ ಸಾವಿರಾರು ಜನರು ಕೆಂಡದ ರಾಶಿಯನ್ನು ತುಳಿಯುವ ಮೂಲಕ ತಮ್ಮ ಹರಕೆಯನ್ನು ತೀರಿಸುತ್ತಾರೆ. ಬ್ರಹ್ಮ ಲಿಂಗೇಶ್ವರನನ್ನು ನಂಬಿರುವ ಕುಟುಂಬದ ಕನಿಷ್ಠ ಒಬ್ಬರು ಸದಸ್ಯರಾದರೂ ಜಾತ್ರೆ ದಿನದಂದು ಬಂದು ಶ್ರೀ ದೇವರಿಗೆ ಪೂಜೆ ಸಲ್ಲಿಸುವುದು ಈ ಭಾಗದ ಬಾಡಿಕೆಯಾಗಿದೆ. ಜಾತ್ರೆಯಂದು ದೇವಸ್ಥಾನಕ್ಕೆ ಆಗಮಿಸುವ ಭಕ್ತರು ತಲೆಯ ಮೇಲೆ ಹೂವು ಹಾಗೂ ಹಣ್ಣು ಕಾಯಿ ಹೊತ್ತುಕೊಂಡು ದೇವರ ದರ್ಶನ ಮಾಡಿ ಅರ್ಚಕರು ನೀಡುವ ಪ್ರಸಾದವನ್ನು ಮನೆಗೆ ಕೊಂಡೊಯ್ಯುವ ಸಂಪ್ರದಾಯವಿದೆ.

ಹೆಮ್ಮಾಡಿ ಹಾಗೂ ಆಸು ಪಾಸಿನಲ್ಲಿ ಬೆಳೆಯುವ ಹಳದಿ ಬಣ್ಣದ ಸೇವಂತಿಗೆ ಹೂವುಗಳನ್ನು ಬ್ರಹ್ಮ ಲಿಂಗೇಶ್ವರನಿಗೆ ಮೊದಲ ಅರ್ಪಿಸಬೇಕು ಎನ್ನುವ ವಾಡಿಕೆಗಳು ಇರುವುದರಿಂದ ಸೇವಂತಿಗೆ ಬೆಳೆದ ಬೆಳೆಗಾರರು ಶ್ರೀ ದೇವರಿಗೆ ಸೇವಂತಿಗೆ ಮಾಲೆಯನ್ನು ಅರ್ಪಿಸುವ ಮೂಲಕ ಧನ್ಯತೆಯನ್ನು ಅನುಭವಿಸುತ್ತಾರೆ.

ಉಡುಪಿ, ಕಾರ್ಕಳ, ಬ್ರಹ್ಮಾವರ, ಪಡುಬಿದ್ರೆ ಸೇರಿದಂತೆ ಜಿಲ್ಲೆಯ ತೆಂಕು ಭಾಗದ ಸಾಕಷ್ಟು ಜನರು ಮಾರಣಕಟ್ಟೆಯ ಬ್ರಹ್ಮ ಲಿಂಗೇಶ್ವರ ದೇವರನ್ನು ನಂಬಿರುವುದರಿಂದ ಕೆಂಡ ಮಹೋತ್ಸವ ಹಾಗೂ ಜಾತ್ರೆಯ ದಿನದಂದು ಭಕ್ತರಿಗೆ ವಿಶೇಷ ಬಸ್ಸು ಹಾಗೂ ವಾಹನದ ಸೌಲಭ್ಯವನ್ನು ಮಾಡಲಾಗುತ್ತದೆ.

ಜಾತ್ರೆಯ ದಿನ ಬದಲು
ಕಳೆದ ಕೆಲವು ವರ್ಷಗಳಿಂದ ಜ.೧೪ ರಂದೆ ಶ್ರೀ ಕ್ಷೇತ್ರದ ಕೆಂಡ ಮಹೂತ್ಸವ ಹಾಗೂ ವಾರ್ಷಿಕ ಜಾತ್ರೆ ನಡೆಯುವುದು ವಾಡಿಕೆ. ಹಲವು ವರ್ಷಗಳ ಬಳಿಕ ಈ ಬಾರಿ ಕೆಂಡ ಮಹೋತ್ಸವ ಜ.೧೫ ರಂದು ಬಂದಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಜ.೧೪ ರಂದೆ ಕೆಂಡ ಸೇವೆ ನಡೆಯುತ್ತದೆ ಎನ್ನುವ ಕಾರಣದಿಂದ ಮಂಗಳವಾರ ಮಧ್ಯಾಹ್ನದಿಂದಲೆ ಶಿವಮೊಗ್ಗ ಹಾಗೂ ಮಲೆನಾಡಿನ ಇತರ ಭಾಗಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಶಾಸಕರಿಂದ ದರ್ಶನ
ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಬುಧವಾರ ಶ್ರೀ ಕ್ಷೇತ್ರ ಮಾರಣಕಟ್ಟೆಗೆ ಭೇಟಿ ನೀಡಿ ವಾರ್ಷಿಕ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗಿಯಾಗಿ ಶ್ರೀ ದೇವರ ದರ್ಶನ ಪಡೆದುಕೊಂಡರು. ಅನುವಂಶೀಕ ಮೊಕ್ತೇಸರ ಸದಾಶಿವ ಶೆಟ್ಟಿ, ಅರ್ಚಕರಾದ ಪಾರತೀಶ್ ಭಟ್, ರಾಮಚಂದ್ರ ಮಂಜ, ಕೊಲ್ಲೂರು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ವ್ಯವಸ್ಥಾಪಕ ಕೆ.ನಾರಾಯಣ ಶೆಟ್ಟಿ, ಉಸ್ತುವಾರಿ ಸಿ.ರಘುರಾಮ ಶೆಟ್ಟಿ, ಉದ್ಯಮಿ ನೈಲಾಡಿ ಶಿವರಾಮ ಶೆಟ್ಟಿ, ಪಾತ್ರಿಗಳಾದ ಗಣಪಯ್ಯ ಶೆಟ್ಟಿ, ಶ್ರೀಧರ ಮರ್ಡಿ ಇದ್ದರು.

ಇಳುವರಿ ಕಡಿಮೆ: ಗಗನಕ್ಕೇರಿದ ಸೇವಂತಿ ದರ:
ಪ್ರತೀ ಬಾರಿ ಮಕರ ಸಂಕ್ರಮಣಕ್ಕೆ ಸರಿಯಾಗಿ ಹೆಮ್ಮಾಡಿ ಸೇವಂತಿಗೆ ಅರಳುವುದು ವಾಡಿಕೆ. ಆದರೆ ಈ ವರ್ಷ ಚಳಿ ಕಡಿಮೆ ಇದ್ದಿದ್ದರಿಂದ ಸಕಾಲದಲ್ಲಿ ಹೂವು ಅರಳದ ಪರಿಣಾಮ ಸೇವಂತಿ ಬೆಳೆಗಾರರು ಆರಂಭದಲ್ಲೇ ನಷ್ಟ ಅನುಭವಿಸುವಂತಾಯಿತು. ಬುಧವಾರ ಮಾರಣಕಟ್ಟೆ ಹಬ್ಬದ ಮೊದಲ ದಿನ ಮಾರಾಟಕ್ಕೆ ಹೂವು ಕಡಿಮೆ ಬಂದ ಕಾರಣ ಹೂವಿನ ಬೇಡಿಕೆ ಹೆಚ್ಚಿತು. ಪ್ರತೀ ವರ್ಷ ಸಾವಿರ ಹೂವಿಗೆ ೧೫೦ ರೂ ಇರುತ್ತಿದ್ದು, ಈ ಬಾರಿ ಹೂವಿನ ದರ ದುಪ್ಪಟ್ಟಾಗಿದೆ.