ಮಾ.9ಕ್ಕೆ ಬಡಗಬೆಟ್ಟು ಸೊಸೈಟಿಯ ನೂತನ ಮಣಿಪಾಲ ಶಾಖೆ ಉದ್ಘಾಟನೆ

ಉಡುಪಿ: ಬಡಗಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ 10ನೇ ಹವಾನಿಯಂತ್ರಿತ ಶಾಖೆ ಇದೇ 9ರಂದು ಬೆಳಿಗ್ಗೆ 10ಗಂಟೆಗೆ ಮಣಿಪಾಲ ಕಮರ್ಷಿಯಲ್‌ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್‌ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡುವರು. ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್‌. ರಾಜೇಂದ್ರ ಕುಮಾರ್‌ ಶಾಖೆಯನ್ನು ಉದ್ಘಾಟಿಸುವರು ಎಂದರು. ಶಾಸಕ ಕೆ. ರಘುಪತಿ ಭಟ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮಾಹೆಯ ಸಹಕುಲಾಪತಿ ಡಾ. ಎಚ್‌.ಎಸ್‌. ಬಲ್ಲಾಳ್‌, ಟಿಎಂಎ ಪೈ ಫೌಂಡೇಶನ್‌ನ ಕಾರ್ಯದರ್ಶಿ ಟಿ. ಅಶೋಕ್‌ ಪೈ, ಬ್ಯಾಂಕ್‌ ಆಫ್‌ ಬರೋಡಾದ ಪ್ರಾದೇಶಿಕ ಮಹಾಪ್ರಬಂಧಕ ರವೀಂದ್ರ ರೈ, ಸಹಕಾರ ಸಂಘಗಳ ಉಪನಿಬಂಧಕ ಆರ್‌. ಗಣೇಶ್‌, ಸಹಾಯಕ ಉಪನಿಬಂಧಕಿ ಚಂದ್ರಪ್ರತಿಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.

ಸೊಸೈಟಿ ಪ್ರಧಾನ ವ್ಯವಸ್ಥಾಪಕ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸೊಸೈಟಿಯು 1980ರಲ್ಲಿ 306 ಸದಸ್ಯರಿಂದ 4,664 ಠೇವಣಿ ಹೊಂದಿದ್ದು, 2019ರ ವೇಳೆಗೆ 29,752 ಸದಸ್ಯರಿಂದ 328 ಕೋಟಿ ಠೇವಣಿ ಹೊಂದಿದೆ. ವಾರ್ಷಿಕ ವಹಿವಾಟು ದಿನಕ್ಕೆ ಸರಾಸರಿ 4.25 ಕೋಟಿಗಿಂತಲೂ ಅಧಿಕವಾಗಿದೆ. 269 ಕೋಟಿ ಸಾಲ ನೀಡಿದೆ. ಆಧುನಿಕ ಶೈಲಿಯ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯ ಮೂಲಕ ಗ್ರಾಹಕರಿಗೆ ಸೊಸೈಟಿಯ ಯಾವುದೇ ಶಾಖೆಯಲ್ಲೂ ಹಣ ತೆಗೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಸೊಸೈಟಿಯ ಸದಸ್ಯರು ಹಾಗೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಣಿಪಾಲದಲ್ಲಿ ನೂತನ ಶಾಖೆ ಆರಂಭಿಸಲಾಗುತ್ತಿದೆ. ಸದ್ಯ ಸಂಸ್ಥೆಯ ಸಿಬ್ಬಂದಿಗಳನ್ನೇ ಹಂಚಿಕೆ ಮಾಡಲಾಗುತ್ತಿದ್ದು, ಸರ್ಕಾರದ ಆದೇಶ ಬಂದ ನಂತರ ಸಿಬ್ಬಂದಿಯ ನೇಮಕಾತಿ ಮಾಡಲಾಗುವುದು. ಸೊಸೈಟಿಯ ಶತಮಾನೋತ್ಸವದ ಅಂಗವಾಗಿ 2 ಕೋಟಿ ವೆಚ್ಚದಲ್ಲಿ 116 ಕ್ಕಿಂತಲೂ ಹೆಚ್ಚಿನ ಸಮಾಜಮುಖಿ
ಕಾರ್ಯಗಳನ್ನು ಮಾಡಲಾಗಿದೆ. ಶತಮಾನೋತ್ಸವದ ನೆನಪಿಗಾಗಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ಬಳಿ 90 ಸೆಂಟ್ಸ್‌ ಜಾಗ ಖರೀದಿಸಿದ್ದು, ಅದರಲ್ಲಿ ಸಹಕಾರಿ ತರಬೇತಿ ಕೇಂದ್ರ, ಗ್ರಂಥಾಲಯ ನಿರ್ಮಿಸುವ ಚಿಂತನೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶತಮಾನೋತ್ಸವ ಸಮಿತಿ ಸಮಿತಿ ಸಂಚಾಲಕ, ನಿರ್ದೇಶಕ ಪುರುಷೋತ್ತಮ್‌ ಪಿ. ಶೆಟ್ಟಿ, ಉಪಾಧ್ಯಕ್ಷ ಎಲ್‌. ಉಮಾನಾಥ್‌ ಇದ್ದರು.