ಮಾ.13ರಿಂದ ಶ್ರೀಕೃಷ್ಣಮಠದ ಗರ್ಭಗುಡಿ ಮೇಲ್ಛಾವಣಿಗೆ ಚಿನ್ನದ ತಗಡು ಅಳವಡಿಕೆ ಕಾರ್ಯ ಆರಂಭ

ಉಡುಪಿ: ಇಲ್ಲಿನ ಶ್ರೀಕೃಷ್ಣಮಠದ ಗರ್ಭಗುಡಿಯ ಮೇಲ್ಛಾವಣಿಗೆ ಬಂಗಾರದ ಹೊದಿಕೆ ಅಳವಡಿಸುವ ಕಾರ್ಯ ಮಾ. 13ರಿಂದ ಆರಂಭಗೊಳ್ಳಲಿದೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಉಡುಪಿ ಶ್ರೀಕೃಷ್ಣಮಠದ ಕನಕ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಗರ್ಭಗುಡಿಯ ಮೇಲ್ಛಾವಣಿ ನವೀಕರಣ ಕಾರ್ಯಕ್ಕೂ ಮುಂಚೆ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆ ಬಳಿಕ ಗರ್ಭಗುಡಿಯ ಶಿಖರ ಕಲಶವನ್ನು ಕೆಳಗಿಳಿಸಿ ಚಿನ್ನ ಲೆಪಿತ ತಗಡು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ನವೀಕರಣ ಕಾರ್ಯಕ್ಕೂ ಮೊದಲು ಮಾ. 12ರಂದು ಪೂರ್ವಭಾವಿಯಾಗಿ ಹೋಮ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನ ಕಾರ್ಯಗಳು ನಡೆಯಲಿವೆ ಎಂದರು.
ಪ್ರತಿದಿನ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗಿನ ಪೂಜೆಗಳನ್ನು ಬೆಳಿಗ್ಗೆ 11ಗಂಟೆಯೊಳಗೆ
ಮುಗಿಸಿ, ಗರ್ಭಗುಡಿಯ ಬಾಗಿಲು ಮುಚ್ಚಿದ ಬಳಿಕ ಮೇಲ್ಛಾವಣಿಯ ಕೆಲಸ ಆರಂಭಿಸಲಾಗುವುದು. ಸಂಜೆ 5ಗಂಟೆಗೆ ಕೆಲಸವನ್ನು ಮುಗಿಸಲಾಗುತ್ತದೆ. ರಾತ್ರಿ ಪೂಜೆಯ ಬಳಿಕ ಅವಶ್ಯವಿದ್ದಲ್ಲಿ ಮತ್ತೆ ಬಾಗಿಲು ಮುಚ್ಚಿ ರಾತ್ರಿ ಪಾಳೆಯದ ಕೆಲಸವನ್ನು ಮಾಡಲಾಗುತ್ತದೆ. ಮರುದಿನ ಕವಾಟೊದ್ಘಾಟನೆಯ ಮೊದಲು ಕೆಲಸ ಮುಗಿಸಲಾಗುತ್ತದೆ ಎಂದು ತಿಳಿಸಿದರು.
ದೇವರಿಗೆ ನಿತ್ಯ ಪೂಜೆ, ದರ್ಶನಕ್ಕೆ ಅವಕಾಶ:
ಶ್ರೀಕೃಷ್ಣ ದೇವರಿಗೆ ನಿತ್ಯ ನಡೆಯುವ ಎಲ್ಲಾ ಸೇವೆಗಳು ಆಬಾದಿತವಾಗಿರುವುದರಿಂದ ಪೂಜೆ, ಉತ್ಸವಾದಿಗಳು ಯಥಾಪ್ರಕಾರ ನಡೆಯುತ್ತದೆ. ನಿತ್ಯ ತುಳಸಿ ಅರ್ಚನೆ ಹಾಗೂ ನಿರಂತರ ಭಜನೆಗಳು ಎಂದಿನಂತೆ ಮುಂದುವರಿಯುತ್ತದೆ. ಅಲ್ಲದೆ, ಕೆಲಸ ಕಾರ್ಯಗಳಿಗೆ ತೊಂದರೆ ಆಗದಂತೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ದೇಗುಲದ
ಶಿಖರಕಲಶಾವರೋಹಣ ನಡೆಸಿದರೆ ಆ ಊರಿನಲ್ಲಿ ನೆಲೆಸಿದ ಎಲ್ಲರೂ ಬ್ರಹ್ಮಕಶಲದವರೆಗೆ
ದೀಕ್ಷಾಬದ್ಧರಾಗಿರಬೇಕೆಂಬ ನಿಯಮವಿದೆ. ಆದರೆ ಆ ನಿಯಮವನ್ನು ಎಲ್ಲರಿಗೂ ಪಾಲಿಸಲು ಸಾಧ್ಯವಾಗದೆ ಇರುವುದರಿಂದ ದೇವರಿಗೆ ಅಪರಾಧ ಶಾಂತಿಗಾಗಿ ಮುಷ್ಠಿಕಾಣಿಕೆಯನ್ನು ಹಾಕಲು ಅವಕಾಶ ಕಲ್ಪಿಸಲಾಗಿದೆ. ಎಲ್ಲ ಭಕ್ತರು ಇದರಲ್ಲಿ ಪಾಲ್ಗೊಳ್ಳಬಹುದು ಎಂದರು.
ಸುವರ್ಣ ಗೋಪುರ ಯೋಜನೆಯ ಉಸ್ತುವಾರಿ ವೆಂಕಟೇಶ್‌ ಶೇಟ್‌ ಮಾತನಾಡಿ, ಶ್ರೀಕೃಷ್ಣಮಠದ ಗರ್ಭಗುಡಿಯ ಮೇಲ್ಛಾವಣಿಗೆ ಚಿನ್ನ ಲೆಪಿತ ತಗಡನ್ನು ಅಳವಡಿಸುವ ‘ಸುವರ್ಣ ಗೋಪುರ ಯೋಜನೆ’ಗೆ 100 ಕೆ.ಜಿ. ಬಂಗಾರ, 800 ಕೆ.ಜಿ. ಬೆಳ್ಳಿ ಹಾಗೂ 100 ಕೆ.ಜಿ ತಾಮ್ರವನ್ನು ಉಪಯೋಗಿಸಲಾಗುತ್ತಿದೆ. ಈಗಾಗಲೇ ಶೇ. 70ರಷ್ಟು ಬಂಗಾರ ಸಂಗ್ರಹವಾಗಿದೆ. 2500 ಚದರ ಅಡಿ ವಿಸ್ತೀರ್ಣದ ಗರ್ಭಗುಡಿಗೆ ಮೊದಲು ಮರದ ಹಲಗೆಯನ್ನು ಅಳವಡಿಸಲಾಗುತ್ತದೆ. ಅದರ ಮೇಲೆ ತಾಮ್ರದ ತಗಡು ಹೊದಿಸಲಾಗುತ್ತದೆ. ಅದರ ಮೇಲೆ ಬೆಳ್ಳಿ ಹಾಗೂ ಚಿನ್ನದ ಹೊದಿಕೆಯನ್ನು ಹಾಕಲಾಗುತ್ತದೆ. ಮೂರು ತಿಂಗಳೊಳಗೆ ಈ ನವೀಕರಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
160 ಗ್ರಾಂ ಬೆಳ್ಳಿಯ ತಗಡಿನ ಮೇಲೆ 20 ಗ್ರಾಂ ಚಿನ್ನ ಲೆಪನ ಮಾಡಿರುವ ಒಂದು
ಶೀಟ್‌ನ್ನು ತಯಾರಿಸಲಾಗುತ್ತದೆ. ಇಂತಹ 5 ಸಾವಿರ ಶೀಟ್‌ಗಳನ್ನು ಗರ್ಭಗುಡಿಗೆ
ಅಳವಡಿಸಲಾಗುತ್ತದೆ. ನೀರು ಒಳ ಹೋಗದಂತೆ ಮೇಲ್ಛಾವಣಿಯನ್ನು ಸಿದ್ಧಪಡಿಸಲಾಗುತ್ತದೆ. ಚಿನ್ನದ ತಗಡು ಹೊದಿಸಲು 15 ಮಂದಿ ಹಾಗೂ ಮರದ ಕೆಲಸಕ್ಕೆ 10 ಮಂದಿ ಸೇರಿದಂತೆ ಒಟ್ಟು 25 ಮಂದಿ ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್‌, ಮಠದ ಪಿಆರ್‌ಒ ಶ್ರೀಶ ಭಟ್‌ ಕಡೆಕಾರ್‌ ಇದ್ದರು.